ರಾಹುಲ್ ಗಾಂಧಿ ಒಬ್ಬ ಅಸಮರ್ಥ ನಾಯಕ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಒಬ್ಬ ಅಸಮರ್ಥ ನಾಯಕನಾಗಿದ್ದಾನೆ. ಹೀಗಾಗಿ ಆ ಪಕ್ಷ ಅವನತಿಯತ್ತ ಸಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಿಚಾರವಾಗಿ ಕಾಂಗ್ರೆಸ್ ಅನವಶ್ಯಕ ಆರೋಪಗಳನ್ನು ಮಾಡುತ್ತಿದೆ ಎಂದು ಟೀಕಿಸಿದರು.
ಕೋವಿಡ್ ನಿರ್ವಹಣೆ ವಿಚಾರವಾಗಿ ಕಾಂಗ್ರೆಸ್ ಸುಳ್ಳು ಆರೋಪಗಳನ್ನ ಮಾಡುತ್ತಿದೆ. ಕಾಂಗ್ರೆಸ್ ನವರು ಹಣ ಮತ್ತು ಹೆಣದ ಮೇಲೆ ರಾಜಕೀಯ ಮಾಡುತ್ತಾರೆ.
ನಮ್ಮ ದೇಶದಲ್ಲಿ ಹೊರತು ಬೇರೆ ಯಾವುದೇ ದೇಶದಲ್ಲಿ ಕೋವಿಡ್ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಪಂಜಾಬ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ವೇಸ್ಟ್ ಆಗಿದೆ.
ಆದರೂ ಕೋವಿಡ್ ನಿರ್ವಹಣೆ ವಿಚಾರವಾಗಿ ಕಾಂಗ್ರೆಸ್ ನಾಯಕರು ವ್ಯರ್ಥ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗರಂ ಆದರು.
ಇದೇ ವೇಳೆ ಎಐಸಿಸಿಗೆ ಅಧ್ಯಕ್ಷರ ನೇಮಕ ವಿಚಾರವಾಗಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಜೋಶಿ, ನೂರಾರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಎರಡು ವರ್ಷವಾದರೂ ತಮ್ಮ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.
ರಾಹುಲ್ ಗಾಂಧಿ ಒಬ್ಬ ಅಸಮರ್ಥ ನಾಯಕನಾಗಿದ್ದಾನೆ. ಹೀಗಾಗಿ ಆ ಪಕ್ಷ ಅವನತಿಯತ್ತ ಸಾಗಿದೆ ಎಂದು ಲೇವಡಿ ಮಾಡಿದರು.









