ಯೂರೋ ಕಪ್ 2021- ಕ್ರಿಸ್ಟಿಯಾನೊ ರೋನಾಲ್ಡೊ ಆಟಕ್ಕೆ ಬೆಚ್ಚಿಬಿದ್ದ ಹಂಗೇರಿ..!
ಪ್ರತಿಷ್ಠಿತ 2021ರ ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಎಫ್ ಗುಂಪಿನಲ್ಲಿ ಬಲಿಷ್ಠ ಪೋರ್ಚ್ ಗಲ್ ತಂಡ ಶುಭಾರಂಭ ಮಾಡಿದೆ.
ಲೀಗ್ ಮೊದಲ ಪಂದ್ಯದಲ್ಲಿ ಪೋರ್ಚ್ಗಲ್ ತಂಡ 3-0 ಗೋಲುಗಳಿಂದ ಹಂಗೇರಿ ತಂಡವನ್ನು ಪರಾಭವಗೊಳಿಸಿದೆ.
ಪೋರ್ಚ್ಗಲ್ ತಂಡದ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಕೊನೆಯ ಗಳಿಗೆಯಲ್ಲಿ ಮಿಂಚಿನ ಎರಡು ಗೋಲು ದಾಖಲಿಸಿ ತಂಡದ ಗೆಲುವಿನ ಅಂತರವನ್ನು ಏರಿಸಿದ್ರು.
ಹಾಗೇ ನೋಡಿದ್ರೆ, ಕ್ರಿಸ್ಟಿಯಾನೊ ರೋನಾಲ್ಡೊ ಅವರಿಗೆ ಪಂದ್ಯದ ಮೊದಲಾರ್ಧದಲ್ಲೇ ಗೋಲು ದಾಖಲಿಸು ಅವಕಾಶವಿತ್ತು. ಆದ್ರೆ ಕ್ರಿಸ್ಟಿಯಾನೊ ಅದನ್ನು ಮಿಸ್ ಮಾಡಿಕೊಂಡ್ರು.
ಇನ್ನೊಂದೆಡೆ ಪೋರ್ಚ್ಗಲ್ ತಂಡಕ್ಕೆ ಹಂಗೇರಿ ತಂಡ ಪ್ರಬಲ ಪ್ರತಿರೋಧವನ್ನೇ ಒಡ್ಡಿತ್ತು. ಪಂದ್ಯದ 84ನೇ ನಿಮಿಷದ ತನಕ ಪೋರ್ಚ್ಗಲ್ ತಂಡದ ದಾಳಿಯನ್ನು ಸಮರ್ಥವಾಗಿಯೇ ಹಂಗೇರಿ ತಂಡ ಎದುರಿಸಿತ್ತು.
ಆದ್ರೆ 84ನೇ ನಿಮಿಷದಲ್ಲಿ ಪೋರ್ಚ್ಗಲ್ ನ ರಫೇಲ್ ಗ್ಯುರೋರಿ ಅವರು ಮೊದಲ ಗೋಲು ದಾಖಲಿಸಿದ್ರೆ, ಪಂದ್ಯದ 87 ಮತ್ತು 90ನೇ ನಿಮಿಷದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸತತ ಎರಡು ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದ್ರು. ಅಲ್ಲದೆ ಯೂರೋ ಕಪ್ ನಲ್ಲಿ 11 ಗೋಲು ದಾಖಲಿಸಿ ಗರಿಷ್ಠ ಗೊಲು ದಾಖಲಿಸಿದ್ದ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ರು. ಈ ಹಿಂದೆ ರೋನಾಲ್ಡೊ ಮತ್ತು ಫ್ರಾನ್ಸ್ ನ ಮೈಕೆಲ್ ಪ್ಲಾಟಿನಿ ತಲಾ 9 ಗೋಲುಗಳೊಂದಿಗೆ ಜಂಟಿಯಾಗಿ ಅಗ್ರ ಸ್ಥಾನದಲ್ಲಿದ್ದರು. ಇದೀಗ ಕ್ರಿಸ್ಟಿಯಾನೊ ರೋನಾಲ್ಡೊ ಅವರು ಮುಂಚೂಣಿಯಲ್ಲಿದ್ದಾರೆ.
ಇನ್ನು ಎಫ್ ಗುಂಪಿನ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ ತಂಡ 1-0 ಗೋಲುಗಳಿಂದ ಜರ್ಮನಿ ತಂಡವನ್ನು ಸೋಲಿಸಿದೆ. ಫ್ರಾನ್ಸ್ ತಂಡದ ಪರ ಮ್ಯಾಟ್ಸ್ ಹಮೆಲ್ಸ್ ಅವರು 20ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.








