ಮೈಸೂರು : ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆಗೆ ಶಾಸಕ ಜಮೀರ್ ಅಹಮದ್ ನೇರ ಕಾರಣ. ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಈ ಪ್ರಕರಣದಲ್ಲಿ ಬಿಬಿಎಂಪಿ ಮತ್ತು ಪೊಲೀಸ್ ಸಿಬ್ಬಂದಿಯ ನಡೆಯೇ ತಪ್ಪು ಎಂಬಂತೆ ಮಾತನಾಡಿರುವ ಶಾಸಕರ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅಡಿಯಲ್ಲಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ಜಮೀರ್ ಅಹಮದ್ ಖಾನ್ ಗೆ ಸಿಎಎ, ಎನ್ ಆರ್ ಸಿ ಕಾಯ್ದೆ ಬಗ್ಗೆ ಗೊತ್ತಾಗುತ್ತದೆ, ಇಸ್ರೇಲ್- ಪ್ಯಾಲೆಸ್ತೇನ್ ಗೊಂದಲವೂ ಅರ್ಥ ಆಗುತ್ತದೆ. ಆದರೆ, ಕೊರೋನಾ ಪರೀಕ್ಷೆಗೆ ಬಂದವರನ್ನು ಹೊಡೆದಿದ್ದು ಸರಿಯಲ್ಲ ಎಂಬುದು ಅರ್ಥವಾಗುವುದಿಲ್ಲವಾ ಎಂದು ಪ್ರಶ್ನಿಸಿದರು.
ಇನ್ನು ಯಾವ ಕ್ಷೇತ್ರವೂ ಶಾಸಕರ, ಸಂಸದರ ಆಸ್ತಿಯಲ್ಲ. ಈ ಕ್ಷೇತ್ರ ನನ್ನದು ಎಂದು ಹೇಳಲು ಇದು ರಿಯಲ್ ಎಸ್ಟೇಟ್ ವ್ಯವಹಾರವಲ್ಲ. ಜಮೀರ್ ಅಹಮದ್ ಗೆ ಯಾರೂ ಚಾಮರಾಜಪೇಟೆಯನ್ನು ಬರೆದುಕೊಟ್ಟಿಲ್ಲ. ತಮ್ಮ ಕರ್ತವ್ಯ ಮಾಡಲು ಹೋದವರ ಮೇಲೆ ಹಲ್ಲೆ ಮಾಡೋದು ಸರಿಯಾ, ಸರ್ಕಾರಿ ಕೆಲಸ ಪಾಲಿಸಲು ಜಮೀರ್ ಅಹಮದ್ ಅನುಮತಿ ಬೇಕಾ ಎಂದು ಕಿಡಿಕಾರಿದರು.