ಶಾಲಾ-ಕಾಲೇಜುಗಳ ಬೋಧಕೇತರ ಸಿಬ್ಬಂದಿಗೂ ಪರಿಹಾರ ಕೊಡಿ
ಬೆಂಗಳೂರು : ಖಾಸಗಿ ಅನುದಾನಿತ ಶಾಲೆ – ಕಾಲೇಜುಗಳ ಬೋದಕೇತರ ಸಿಬ್ಬಂದಿಗೂ ಪಾರಿಹಾರ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಬಿಡಿಗಾಸಿನ ಪರಿಹಾರದ ಪ್ಯಾಕೇಜ್ ಘೋಷಿಸಿದೆ.
ಅದರಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೂ ಸೇರಿಸಿದ್ದಾರೆ. ಈ ಪ್ಯಾಕೇಜ್ ನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನ ಎಂದು ತಿಳಿಸಲಾಗಿದೆ.
ಆದರೆ ಈ ಪ್ಯಾಕೇಜ್ ಘೋಷಿಸುವಾಗ ಸರ್ಕಾರ ಖಾಸಗಿ ಅನುದಾನಿತ ಶಾಲೆಗಳ ಖಾಯಂ ಅಲ್ಲದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕೈ ಬಿಟ್ಟಿದೆ. ಇದರಿಂದ ಖಾಸಗಿ ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅನುದಾನಿತ ಶಾಲೆ-ಕಾಲೇಜುಗಳಲ್ಲೂ 3-5 ಸಾವಿರ ರೂಪಾಯಿ ಮಾತ್ರ ಪಡೆದು ಕೆಲಸ ಮಾಡುವ ಸಾಕಷ್ಟು ಮಂದಿ ಅತಿಥಿ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು ಇದ್ದಾರೆ. ಅವರಿಗೂ ಪರಿಹಾರ ಘೋಷಿಸಬೇಕು.
ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು. ಅಥವಾ ಅರ್ಜಿ ಕರೆದು ಭಿಕ್ಷೆಯಂತೆ ಒಂದೆರಡು ಸಾವಿರ ನೀಡುವ ಬದಲಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಈ ಸಿಬ್ಬಂದಿಗಳ ವಿವರಗಳನ್ನು ಪಡೆದು ನೇರವಾಗಿ ಅವರ ಖಾತೆಗಳಿಗೆ ಪರಿಹಾರದ ಹಣವನ್ನು ವರ್ಗಾಯಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.









