ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯ ಅಬ್ಬರ ಕಮ್ಮಿಯಾಗುತ್ತಿದೆಯಾ..?
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ನಾಯಕನಾಗಿ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿರುವ ವಿರಾಟ್ ಕೊಹ್ಲಿ ಮೊದಲ ಬಾರಿ ಪ್ರತಿಷ್ಠಿತ ಐಸಿಸಿ ಪ್ರಶಸ್ತಿಯನ್ನು ಗೆಲ್ಲುವ ಹುಮ್ಮಸಿನಲ್ಲಿದ್ದಾರೆ.
ಆಧುನಿಕ ಕ್ರಿಕೆಟ್ ನ ರನ್ ಮೇಷಿನ್ ಹಾಗೂ ಚೇಸಿಂಗ್ ಗಾಡ್ ಖ್ಯಾತಿಯ ವಿರಾಟ್ ಕೊಹ್ಲಿ ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 27 ಶತಕ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 43 ಶತಕಗಳನ್ನು ದಾಖಲಿಸಿ ಆಧುನಿಕ ವಿಶ್ವ ಕ್ರಿಕೆಟ್ ನ ಚಾಂಪಿಯನ್ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ.
ಆದ್ರೆ ಕಳೆದ ಮೂರು ವರ್ಷಗಳ ಟೆಸ್ಟ್ ಪಂದ್ಯಗಳ ಅಂಕಿ ಅಂಶಗಳನ್ನು ತೆಗೆದುಕೊಂಡಾಗ ವಿರಾಟ್ ಕೊಹ್ಲಿ ನಿರಾಸೆ ಅನುಭವಿಸಿದ್ದಾರೆ.
2019ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊಲ್ಕತ್ತಾದಲ್ಲಿ ನಡೆದಿದ್ದ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ನಂತರ ಇಲ್ಲಿಯವರೆಗೆ ಮೂರಂಕೆಯ ಮೊತ್ತವನ್ನು ದಾಖಲಿಸಿಲ್ಲ.
ಶತಕದ ಬರವನ್ನು ಎದುರಿಸುತ್ತಿರುವ ವಿರಾಟ್ ಕೊಹ್ಲಿ ರನ್ ಗಳಿಕೆಯಲ್ಲೂ ಹಿಂದೆ ಬಿದ್ದಿದ್ದಾರೆ.
2019ರ ನಂತರ ವಿರಾಟ್ ಕೊಹ್ಲಿ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2019ರಲ್ಲಿ ವಿರಾಟ್ ಕೊಹ್ಲಿ 612 ರನ್ ಗಳಿಸಿದ್ದರು. 2020ರಲ್ಲಿ 116 ರನ್ ಹಾಗೂ 2021ರ ಇಂಗ್ಲೆಂಡ್ ಸರಣಿಯಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 172 ರನ್. ಹೀಗೆ ಕಳೆದ ಮೂರು ವರ್ಷಗಳಲ್ಲಿ ವಿರಾಟ್ ಕೊಹ್ಲಿಯವರ ರನ್ ಗಳಿಕೆ 900 ರನ್ ಮಾತ್ರ.
ಇನ್ನು ಇಂಗ್ಲೆಂಡ್ ನೆಲದಲ್ಲಿ ವಿರಾಟ್ ಕೊಹ್ಲಿ ಆಡುತ್ತಿರುವುದು ಮೂರನೇ ಬಾರಿ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಭಾರೀ ನಿರಾಸೆ ಅನುಭವಿಸಿದ್ದರು. 10 ಇನಿಂಗ್ಸ್ ಗಳಲ್ಲಿ ವಿರಾಟ್ ಗಳಿಸಿದ್ದು 134 ರನ್.
ಆದ್ರೆ 2018ರಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ರನ್ ಮಳೆಯನ್ನೇ ಸುರಿಸಿದ್ದರು. 2018ರ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೊಹ್ಲಿ 593 ರನ್ ದಾಖಲಿಸಿದ್ದರು.
ಅಂದ ಹಾಗೇ ವಿರಾಟ್ ಕೊಹ್ಲಿ 2016ರಿಂದ 2018ರವರೆಗೆ ಅದ್ಭುತ ಫಾರ್ಮ್ ನಲ್ಲಿದ್ದರು. ಮೂರು ವರ್ಷ ವಿರಾಟ್ ರನ್ ಮೇಷಿನಂತೆ ರನ್ ದಾಖಲಿಸಿದ್ದರು. ಜೊತೆಗೆ ಶತಕಗಳ ಮೇಲೆ ಶತಕಗಳನ್ನು ಸಿಡಿಸಿದ್ದರು. ಈ ಅವಧಿಯಲ್ಲಿ 25 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದ ರನ್ 3596. ಆದ್ರೆ ನಂತರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಧಾರಣೆಯನ್ನು ಕಾಯ್ದುಕೊಳ್ಳಲು ವಿಫಲರಾಗಿದ್ದಾರೆ.
ಇದೀಗ ವಿರಾಟ್ ಕೊಹ್ಲಿ ಫೈನಲ್ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸುತ್ತಾರೆ, ರನ್ ಮಳೆಯನ್ನೇ ಹರಿಸುತ್ತಾರೆ ಅನ್ನೋ ನಂಬಿಕೆ ಇದೆ. ಈ ನಡುವೆ, ವಿರಾಟ್ ಕೊಹ್ಲಿಯ ರನ್ ದಾಹಕ್ಕೆ ನ್ಯೂಜಿಲೆಂಡ್ ನ ವೇಗಿ ಟೀಮ್ ಸೌಥಿ ಅವರು ಅಡ್ಡಿಯಾಗುವಂತಹ ಸಾಧ್ಯತೆ ಇದೆ.
ಟೀಮ್ ಸೌಥಿ ಮತ್ತು ವಿರಾಟ್ ಕೊಹ್ಲಿ 2008ರ 19 ವಯೋಮಿತಿ ವಿಶ್ವಕಪ್ ಟೂರ್ನಿಯಿಂದ ಪರಿಚಿತರು. ಆ ನಂತರ ಇಬ್ಬರ ನಡುವೆಯೂ ಸಾಕಷ್ಟು ಸ್ಪರ್ಧೆ ನಡೆದಿದೆ.
ಅಂದ ಹಾಗೇ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಒಟ್ಟು ಹನ್ನೊಂದು ಬಾರಿ ಟೀಮ್ ಸೌಥಿ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ. ಏಳು ಬಾರಿ ಏಕದಿನ ಪಂದ್ಯಗಳಲ್ಲಿ, ಎರಡು ಬಾರಿ ಟಿ-ಟ್ವೆಂಟಿ ಪಂದ್ಯಗಳಲ್ಲಿ ಮತ್ತು ಮೂರು ಬಾರಿ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಟೀಮ್ ಸೌಥಿ ಅವರಿಗೆ ಬಲಿಯಾಗಿದ್ದಾರೆ.
ಒಟ್ಟಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಎಲ್ಲರ ಚಿತ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಮೇಲೆ ಬಿದ್ದಿದೆ.