ಮಿಲ್ಕಾ ಸಿಂಗ್ ಬಯೋಪಿಕ್ ನಲ್ಲಿ ನಟಿಸಿದ್ದ ಫರಾನ್ ಅಖ್ತಾರ್ ಭಾವನಾತ್ಮಕ ಪತ್ರ..!
ಭಾರತದ ಲೆಜೆಂಡರಿ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ನಿಧನಕ್ಕೆ ಗಣ್ಯರು , ಸಿನಿಮಾ ತಾರೆಯರು , ರಾಜಕಾರಣಿಗಳು ಸಂತಾಪ ಸೂಚಿಸುತ್ತಿದ್ದಾರೆ.. 91 ವರ್ಷದ ಮಿಲ್ಕಾ ಸಿಂಗ್ ಕೊರೊನಾ ವೈರಸ್ ಗೆ ತುತ್ತಾಗಿದ್ದರು. ಒಂದು ತಿಂಗಳ ಸತತ ಹೋರಾಟದ ನಂತರ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು..
ಇನ್ನೂ ಅವರದ್ದೇ ಬಯೋಪಿಕ್ ನಲ್ಲಿ ನಟಿಸಿ ಅವರ ಪಾತ್ರಕ್ಕೆ ಜೀವ ತುಂಬಿದ್ದ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾ ಖ್ಯಾತಿಯ ನಟ ಫರಾನ್ ಅಖ್ತಾರ್ ಅವರು ಭಾವನಾತ್ಮಕ ಪತ್ರ ಬರೆಯುವ ಮೂಲಕ ಅಗಲಿದ ಅಪ್ರತಿಮ ಆಟಗಾರನಿಗೆ ಸಂತಾಪ ಸೂಚಿಸಿದ್ದಾರೆ.
‘ಆತ್ಮೀಯ ಮಿಲ್ಕಾ ಸಿಂಗ್ ಜಿ, ನನ್ನಲ್ಲಿ ಒಂದು ಭಾಗವಾಗಿದ್ದ ನೀವು ಇನ್ಮುಂದೆ ಇಲ್ಲ ಎಂದು ಒಪ್ಪಿಕೊಳ್ಳಲು ನಾನು ನಿರಾಕರಿಸುತ್ತೇನೆ. ಬಹುಶಃ ನಾನು ನಿಮ್ಮಿಂದ ಪಡೆದ ಮೊಂಡುತನ ಕಡೆಯವರೆಗೂ ಇರಬಹುದು. ಅದನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ.
ಸತ್ಯ ಏನು ಎಂದರೆ ನೀವು ಯಾವಾಗಲು ಜೀವಂತವಾಗಿ ಇರುತ್ತೀರಿ. ಏಕೆಂದರೆ ನೀವು ದೊಡ್ಡ ಹೃದಯವಂತ, ತುಂಬಾ ಸರಳ ವ್ಯಕ್ತಿ. ನೀವು ಕನಸನ್ನು ಪ್ರತಿನಿಧಿಸುತ್ತೀರಿ, ಪ್ರಾಮಾಣಿಕತೆ, ದೃಢ ನಿರ್ಧಾರವನ್ನು ಪ್ರತಿನಿಧಿಸುತ್ತೀರಿ. ನೀವು ನಮ್ಮೆಲ್ಲರ ಜೀವನವನ್ನು ಮುಟ್ಟಿದ್ದೀರಿ. ನಿಮ್ಮನ್ನು ತಂದೆ ಮತ್ತು ಸ್ನೇಹಿತ ಎಂದು ತಿಳಿದವರಿಗೆ ಇದು ಆಶೀರ್ವಾದ. ನಿರಂತರ ಸ್ಫೂರ್ತಿಯ ಮೂಲ. ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಬರೆದಿದ್ದಾರೆ.








