ಮೋದಿ ಪೌರುಷವಿಲ್ಲದ ಉತ್ತರಕುಮಾರ : ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ದ ಅಷ್ಟೆ. ಉಳಿದಂತೆ ಚೀನಾದ ದೊರೆಗಳಿರಲಿ, ಕರ್ನಾಟಕದ ಸ್ವಪಕ್ಷೀಯ ಮರಿಗಳಿರಲಿ, ಮೋದಿಯವರು ಪೌರುಷವಿಲ್ಲದ ಉತ್ತರಕುಮಾರ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ಬೆಳವಣಿಗೆಗಳ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ರಾಜ್ಯದ ಆಡಳಿತ ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತವನ್ನು ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ಪ್ರತಿನಿಧಿಯಾಗಿ ಬಂದಿದ್ದ ಅರುಣ್ ಸಿಂಗ್ ಎಂಬ ಬಡಪಾಯಿಯ ಕೆಲಸ ‘ಬಂದ ಪುಟ್ಟಾ..ಹೋದ ಪುಟ್ಟಾ’ ಎಂದಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ದ ಅಷ್ಟೆ. ಉಳಿದಂತೆ ಚೀನಾದ ದೊರೆಗಳಿರಲಿ, ಕರ್ನಾಟಕದ ಸ್ವಪಕ್ಷೀಯ ಮರಿಗಳಿರಲಿ, ಮೋದಿಯವರು ಪೌರುಷವಿಲ್ಲದ ಉತ್ತರಕುಮಾರ ಎಂದು ಟೀಕಿಸಿದ್ದಾರೆ.
ನಂತರ ಭದ್ರಾ ಮೇಲ್ದಂಡೆ ಕಾಮಗಾರಿ ಕಿಕ್ ಬ್ಯಾಕ್ ಆರೋಪದ ಬಗ್ಗೆ ಮಾತನಾಡಿ, ಸಭದ್ರಾ ಮೇಲ್ದಂಡೆ ಕಾಮಗಾರಿಯ ರೂ. 20,000 ಕೋಟಿ ಟೆಂಡರ್ ನಲ್ಲಿ ವಿಜಯೇಂದ್ರ ಶೇ.10 ರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಆರೋಪವನ್ನು ಎಸಿಬಿ ತನಿಖೆಗೆ ಒಪ್ಪಿಸಬೇಕು.
ಎರಡು ಕಾರಣಗಳಿಗಾಗಿ ಈ ಆರೋಪ ಗಂಭೀರ ಸ್ವರೂಪದ್ದಾಗಿದೆ. ಮೊದಲನೆಯದಾಗಿ ಆರೋಪ ನೇರವಾಗಿ ಮುಖ್ಯಮಂತ್ರಿಗಳ ಮಗನ ಮೇಲೆ ಮಾಡಲಾಗಿದೆ, ಎರಡನೆಯದಾಗಿ ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯರೇ ಈ ಆರೋಪ ಮಾಡಿದ್ದಾರೆ ಎಂದು ಹೇಳಿದರು.