ನವದೆಹಲಿ : ದೇಶದಲ್ಲಿ ಕೊರೊನಾಸುರನ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಸೋಂಕಿಗೆ ಲಸಿಕೆ ಇಲ್ಲದಿರುವುದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಈ ಏತನ್ಮಧ್ಯೆ ಪ್ಲಾಸ್ಮಾ ಥೆರಪಿ ಎನ್ನುವ ಚಿಕಿತ್ಸೆ ಕೊರೊನಾ ವಿರುದ್ಧದ ಹೋರಾಟಕ್ಕೆ ಸಂಜೀವಿನಿ ರೂಪದಲ್ಲಿ ಕಾಣುತ್ತಿದೆ.
ದೆಹಲಿಯ ಸಾಕೇತ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಮೊದಲ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಾಲ್ಕು ದಿನಗಳಲ್ಲಿ ಕೊರೊನಾ ಸೋಂಕು ನೆಗೆಟಿವ್ ರಿಪೋರ್ಟ್ ಬಂದಿದೆ.
ಏಪ್ರಿಲ್ ನಾಲ್ಕರಂದು 49 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿತು. ನಿರಂತರ ಚಿಕಿತ್ಸೆ ನೀಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕುಟುಂಬದ ಮನವಿ ಮೇರೆಗೆ ಏಪ್ರಿಲ್ 14ರಂದು ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಥೆರಪಿ ಬಳಿಕ ನಾಲ್ಕು ದಿನಗಳಲ್ಲಿ ಸೋಂಕಿತ ವ್ಯಕ್ತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಅಲ್ಲದೆ ವೆಂಟಿಲೇಟರ್ ಸಹಾಯವಿಲ್ಲದೆ ಸೋಂಕಿತ ವ್ಯಕ್ತಿ ಉಸಿರಾಡುತ್ತಿದ್ದಾನೆ ಮತ್ತು ಇತ್ತಿಚೇಗೆ ನಡೆಸಿದ ಎರಡು ಟೆಸ್ಟ್ ಗಳಲ್ಲಿ ಸೋಂಕು ನೆಗೆಟಿವ್ ರಿಪೋರ್ಟ್ ಬಂದಿದೆ ಎಂದಿದ್ದಾರೆ.
ಪ್ಲಾಸ್ಮಾ ಥೆರಪಿ ಎಂದರೇನು?
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ.