ಮ್ಯಾನ್ಮಾರ್ ನಿಂದ ಭಾರತ, ಥಾಯ್ಲೆಂಡ್ ನತ್ತ ಫಲಾಯನ ಮಾಡಿದ 10 ಸಾವಿರ ನಿರಾಶ್ರಿತರು
ಮ್ಯಾನ್ಮಾರ್ ನಲ್ಲಿ ಮಿಲಿಟರಿ ಸರ್ಕಾರ ಅಧಿಪತ್ಯ ಸಾಧಿಸಿದ ನಂತರ ಅಲ್ಲಿನ ಪ್ರಜೆಗಳು ಮರುಸ್ಥಾಪನೆಗಾಗಿ ನಡೆಸುತ್ತಿರುವ ಹೋರಾಟವು ಹಿಂಸಾತ್ಮಕ ರೂಪ ತಾಳಿದೆ.. ಮಿಲಿಟರಿ ಪಡೆ ಈಗಾಗಗ್ಲೇ ನೂರಾರು ಜನರ ಜೀವ ಬಲಿ ಪಡೆದುಕೊಂಡಿದೆ.. ಈ ನಡುವೆ ಸುಮಾರು 10 ಸಾವಿರ ನಾಗರಿಕರು ಮ್ಯಾನ್ಮಾರ್ ನಿಂದ ಭಾರತ ಮತ್ತು ಥಾಯ್ಲೆಂಡ್‌ಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಮ್ಯಾನ್ಮಾರ್ ನ ವಿಶೇಷ ರಾಯಭಾರಿ ಕ್ರಿಸ್ಟೈನ್ ಸ್ಕ್ರಾನೆರ್ ಬರ್ಗೆನರ್ ಹೇಳಿದ್ದಾರೆ.
ಹೌದು ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಈ ಪ್ರಮಾಣದ ನಾಗರಿಕರ ಪಲಾಯನ ಪ್ರಕ್ರಿಯೆಯಿಂದ ಪ್ರಾದೇಶಿಕವಾಗಿ ಬಿಕ್ಕಟ್ಟಿನ ಬೆದರಿಕೆಯನ್ನು ಅನಾವರಣಗೊಳಿಸುತ್ತಿದೆ ಎಂದು ಹೇಳಿದ್ದಾರೆ. ಮ್ಯಾನ್ಮಾರ್‌ನಲ್ಲಿ ನಾನು ನಿತ್ಯ ಸಂಪರ್ಕದಲ್ಲಿರುವ ಪಾಲುದಾರರಿಂದ ಪಡೆದಿರುವ ಮಾಹಿತಿ ಪ್ರಕಾರ, ಜನರು ಬಹಳ ಸಂಕಷ್ಟದಲ್ಲಿದ್ದಾರೆ. ಕೆಲವರಿಗೆ ಬದುಕುವ ವಿಶ್ವಾಸವಿಲ್ಲದೇ ಭಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಸಮುದಾಯದ ಸಹಾಯದ ಅನುಪಸ್ಥಿತಿಯಲ್ಲಿ, ನಾಗರಿಕರು, ತಮ್ಮ ರಕ್ಷಣೆಗಾಗಿ ನಾಗರಿಕ ರಕ್ಷಣಾ ಪಡೆಗಳನ್ನು ರಚಿಸಿಕೊಂಡು, ತಾವೇ ತಯಾರಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಹೋರಾಟಕ್ಕೆ ಬಳಸುತ್ತಿದ್ದಾರೆ. ಪ್ರಜಾಪ್ರಭುತ್ವದ ಏಕತೆಯ ಆಧರದ ಮೇಲೆ ಸ್ಥಳೀಯ ಸಶಸ್ತ್ರ ಸಂಘಟನೆಗಳಿಂದ ಸೇನಾ ತರಬೇತಿ ಪಡೆಯುತ್ತಿದ್ದಾರೆ.
ಹಲವು ದಶಕಗಳಿಂದ ಶಸ್ತ್ರಾಸ್ತ್ರ ಸಂಘರ್ಷವನ್ನೇ ಕಾಣದ ದೇಶದ ವಿವಿಧ ವಲಯಗಳು ಕ್ರಮೇಣ ಅಶಾಂತಿಯ ತಾಣಗಳಾಗುತ್ತಿವೆ. ಕೇಂದ್ರೀಯ ಮ್ಯಾನ್ಮಾರ್ ಮತ್ತು ಚೀನಾ, ಭಾರತ ಮತ್ತು ಥಾಯ್ಲೆಂಡ್ ರಾಷ್ಟ್ರಗಳ ಗಡಿ ಭಾಗವು ಸೇರಿದಂತೆ ಮ್ಯಾನ್ಮಾರ್ ನಾದ್ಯಂತ ಸಂಘರ್ಷಗಳು ಮುಂದುವರಿದಿವೆ. ಇದರಿಂದ 1.75 ಲಕ್ಷ ನಾಗರಿಕರು ನಿರ್ಗತಿಕರಾಗಿದ್ದಾರೆ ಮತ್ತು 10 ಸಾವಿರ ನಿರಾಶ್ರಿತರು ಭಾರತ ಮತ್ತು ಥಾಯ್ಲೆಂಡ್‌ನತ್ತ ಪಲಾಯನ ಮಾಡಿದ್ದಾರೆ. ಎಂದು ಹೇಳಿದ್ದಾರೆ.