ಭೋಪಾಲ್ : ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕಾಗಿ ಭಾರತಕ್ಕೆ ಭಾರತವೇ ಲಾಕ್ ಡೌನ್ ಆಗಿದೆ. ಇದರ ನಡುವೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರವು ಸಂಪುಟ ವಿಸ್ತರಣೆ ಮಾಡಿದೆ. ಶಾಸಕ ನರೋತ್ತಮ್ ಮಿಶ್ರಾ, ಕಮಲ್ ಪಟೇಲ್, ಮೀನಾ ಸಿಂಗ್, ತುಲಸಿ ಸಿಲಾವತ್, ಮತ್ತು ಗೋವಿಂದ್ ಸಿಂಗ್ ರಜಪುತ್ ಅವರು ಇಂದು ಪ್ರಮಾಣವಚನವನ್ನು ಸ್ವೀಕರಿಸಿದರು.
ಕಳೆದ ಮಾರ್ಚ್.23ರಂದೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಕೊರೊನಾ ವೈರಸ್ ಮತ್ತು ಭಾರತ ಲಾಕ್ ಡೌನ್ ನಡುವೆ ಸಂಪುಟ ವಿಸ್ತರಣೆ ಕಾರ್ಯವೇ ಸರಿಯಾಗಿ ನಡೆದಿರಲಿಲ್ಲ. ದೇಶದಲ್ಲಿ ಎದುರಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯದಲ್ಲಿ ಆರೋಗ್ಯ ಸಚಿವರೇ ಇರಲಿಲ್ಲ. ಈ ಲೋಪವನ್ನು ಸರಿದೂಗಿಸುವ ನಿಟ್ಟಿನಲ್ಲಿ ಇಂದು ಸಂಪುಟ ವಿಸ್ತರಣೆಯನ್ನೇನೋ ಮಾಡಲಾಗಿದೆ. ಆದರೆ ಆರೋಗ್ಯ ಸಚಿವ ಖಾತೆಯನ್ನು ಯಾರು ನಿಭಾಯಿಸುತ್ತಾರೆ ಎನ್ನುವುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.
ಮಧ್ಯಪ್ರದೇಶದಲ್ಲಿ ಈ ಹಿಂದೆ ಕಮಲನಾಥ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ 22 ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ರಾಜಕೀಯ ಹೈಡ್ರಾಮಾ ಶುರುವಾಯಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಬಹುಮತ ದಕ್ಕಿದ್ದು ನಾಲ್ಕನೇ ಬಾರಿ ಸಿಎಂ ಆಗಿ ಶಿವರಾಜ್ ಸಿಂಗ್ ಚೌವ್ಹಾಣ್ ಅಧಿಕಾರದ ಗದ್ದುಗೆಗೆ ಏರಿದರು.








