ಯೂರೋ ಕಪ್ – ಪ್ರೀ ಕ್ವಾರ್ಟರ್ ಫೈನಲ್ ತಲುಪಿದ ಕ್ರೊವೇಶಿಯಾ – ಇಂಗ್ಲೆಂಡ್
ಗೆಲ್ಲಲೇಬೇಕಾದ ಪಂದ್ಯದಲ್ಲಿ ಅದ್ಭುತ ಆಟವನ್ನಾಡಿದ್ದ ಕ್ರೊವೇಶಿಯಾ ತಂಡ ಯೂರೋ ಕಪ್ ಫುಟ್ ಬಾಲ್ ಟೂರ್ನಿಯ ಡಿ ಗುಂಪಿನಲ್ಲಿ ಎರಡನೇ ತಂಡವಾಗಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಡಿ ಗುಂಪಿನ ಮೊದಲ ಪಂದ್ಯದಲ್ಲಿ ಕ್ರೊವೇಶಿಯಾ 3-1 ಗೋಲುಗಳಿಂದ ಸ್ಕಾಟ್ ಲೆಂಡ್ ತಂಡವನ್ನು ಪರಾಭವಗೊಳಿಸಿತು.
ಕ್ರೊವೇಶಿಯಾ ತಂಡದ ಪರ 17ನೇ ನಿಮಿಷದಲ್ಲಿ ನಿಕೊಲಾ ವ್ಲಾಸಿಕ್ ಮೊದಲ ಗೋಲು ದಾಖಲಿಸಿ ಅಂತರವನ್ನು 1-0ಕ್ಕೇರಿಸಿದ್ರು. ಆದ್ರೆ ಪಂದ್ಯದ 42ನೇ ನಿಮಿಷದಲ್ಲಿ ಸ್ಕಾಟ್ ಲೆಂಡ್ ತಂಡ ಅಂತರವನ್ನು ಸಮಗೊಳಿಸಲು ಯಶಸ್ವಿಯಾಯ್ತು. ಸ್ಕಾಟ್ ಲೆಂಡ್ ನ ಕ್ಯಾಲಿಮ್ ಮೆಕ್ ಗ್ರೆಗೊರ್ ಗೋಲು ದಾಖಲಿಸಿದ್ರು. ಇದರಿಂದ ಮೊದಲಾರ್ಧದ ಪಂದ್ಯ 1-1ರಿಂದ ಸಮಗೊಂಡಿತ್ತು.
ಆದ್ರೆ ದ್ವಿತೀಯಾರ್ಧದಲ್ಲಿ ಕ್ರೊವೇಶಿಯಾ ತಂಡ ಮತ್ತಷ್ಟು ಆಕ್ರಮಣಕಾರಿಯ ಆಟವನ್ನಾಡಿ ಯಶ ಸಾಧಿಸುವಲ್ಲಿ ಸಫಲವಾಯ್ತು. ಕ್ರೊವೇಶಿಯಾದ ಲುಕಾ ಮ್ಯಾಡ್ರಿಕ್ 62 ಮತ್ತು ಐವಾನ್ ಪೆರಿಸಿಕ್ 77ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೆಲುವಿನ ಅಂತರವನ್ನು 3-1ಕ್ಕೇರಿಸಿದ್ರು. ಅಲ್ಲದೆ ಗೋಲುಗಳ ಲೆಕ್ಕಚಾರದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಗೆ ಅರ್ಹತೆಯನ್ನು ಪಡೆದುಕೊಂಡಿತ್ತು.
ಡಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ದಾಖಲಿಸಿತು. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು ಅಗ್ರ ಸ್ಥಾನದೊಂದಿಗೆ 16ರ ಘಟ್ಟ ತಲುಪಿತು.
ಲೀಗ್ ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ 1-0 ಗೋಲುಗಳಿಂದ ಚೆಕ್ ಗಣರಾಜ್ಯ ತಂಡವನ್ನು ಮಣಿಸಿತು. ಈ ಸೋಲಿನೊಂದಿಗೆ ಚೆಕ್ ಗಣರಾಜ್ಯದ ಮುಂದಿನ ಹಂತ ಪ್ರವೇಶಿಸುವ ಕನಸು ಕೂಡ ಭಗ್ನಗೊಂಡಿತು.
ಇಂದಿನ ಪಂದ್ಯದಲ್ಲಿ ಸ್ವೀಡನ್ ಮತ್ತು ಪೋಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೊಂದು ಪಂದ್ಯದಲ್ಲಿ ಸ್ಲೊವೇಕಿಯಾ ಮತ್ತು ಸ್ಪೇನ್ ತಂಡಗಳು ಕಾದಾಟ ನಡೆಸಲಿವೆ. ಸ್ಪೇನ್ ಮತ್ತು ಸ್ಲೊವೇಕಿಯಾ ತಂಡಗಳಲ್ಲಿ ಗೆಲುವು ಅನಿವಾರ್ಯ. ಗೆದ್ದ ತಂಡ ಮುಂದಿನ ಹಂತ ತಲುಪಲಿದೆ. ಹೀಗಾಗಿ ಈ ಪಂದ್ಯ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.








