ಅನಾರೋಗ್ಯ ಹಿನ್ನೆಲೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಉತ್ತರ ಕೊರಿಯಾದ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸದ್ಯ ಹಾಸಿಗೆ ಮೇಲಿಂದ ಏಳಲಾಗದ ಸ್ಥಿತಿಯಲ್ಲಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂಬ ಮಾಹಿತಿ ಅಮೆರಿಕಾ ಗುಪ್ತಚರ ಅಧಿಕಾರಿಗಳಿಗೆ ಸಿಕ್ಕಿದೆ. ದಕ್ಷಿಣ ಕೊರಿಯಾದ ಡೈಲಿ ಎನ್ ಕೆ ಸುದ್ದಿ ಸಂಸ್ಥೆ ಪ್ರಕಾರ, ಏಪ್ರಿಲ್ 12ರಂದು ಕಿಮ್ ಜಾಂಗ್ ಉನ್ ಗೆ ಹ್ಯಾಂಗ್ಸಂಗ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದಿತ್ತು. 36 ವರ್ಷದ ಕಿಮ್ ಸದ್ಯ ಮೌಂಟ್ ಕುಮ್ಮಾಂಗ್ ರೆಸಾರ್ಟ್ ನಲ್ಲಿರೋ ವಿಲ್ಲಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.. ಈ ಮಹಾನುಭವ ಅಧಿಕಾರ ವಹಿಸಿಕೊಂಡ ಬಳಿಕ ಕುಟುಂಬದ ಪ್ರಮುಖ ಸದಸ್ಯರೇ ಇಲ್ಲವಾಗಿದ್ದಾರೆ. ಅಂದ್ರೆ ಈತನ ಅಣ್ಣ ಕಿಮ್ ಜೊಂಗ್-ನಾಮ್ ಅವರನ್ನು ಫೆಬ್ರವರಿ 2017ರಲ್ಲಿ ಮಲೇಷ್ಯಾದಲ್ಲಿ ರಾಸಾಯನಿಕ ದಾಳಿಯಲ್ಲಿ ಹತ್ಯೆ ಮಾಡಲಾಯ್ತು. ಚಿಕ್ಕಪ್ಪ ಜಾಂಗ್ ಸಾಂಗ್-ಥೇಕ್ ಅವರನ್ನು 2013ರಲ್ಲಿ ಕಾನೂನು ಬಾಹಿರವಾಗಿ ಮಷಿನ್ ಗನ್‌ಗಳನ್ನು ಬಳಸಿದ ಆರೋಪದ ಅಡಿಯಲ್ಲಿ ಕಿಮ್ ಜಾಂಗ್ ಉನ್ ಸೂಚನೆ ಮೇರೆಗೆ ಹತ್ಯೆ ಮಾಡಲಾಗಿತ್ತು.
ಹೀಗಾಗಿ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ ಹಿರಿಯ ನಾಯಕರು ಈ ಪಟ್ಟವನ್ನು ಅಲಂಕರಿಸುವ ಸಾಧ್ಯತೆ ಇದೆ. ಅಂತಹ ನಾಯಕರ ಸಾಲಿನಲ್ಲಿ ಸಂಘಟನೆ ಮತ್ತು ಮಾರ್ಗದರ್ಶನ ವಿಭಾಗದ ಅಧ್ಯಕ್ಷರಾಗಿರುವ ಚೋ ರ್ಯೊಂಗ್ ಹೇ ಮೊದಲಿಗರಾಗಿದ್ದಾರೆ.
ಇನ್ನು ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೋ ಜಾಂಗ್ ಅವರು ಅಧಿಕಾರ ಹಿಡಿಯುತ್ತಾರೆ ಎಂದೂ ಸಹ ಹೇಳಲಾಗುತ್ತಿದೆ. ಈಕೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ವಿಶ್ವಾಸನೀಯ ಸಲಹೆಗಾರ್ತಿಯಾಗಿದ್ದರು. ಆದ್ರೆ ಈಕೆಗೆ ಸರ್ವಾಧಿಕಾರಿಯಾಗುವ ಅವಕಾಶವಿದ್ದರೂ ಉತ್ತರ ಕೊರಿಯಾದ ಸಾಂಪ್ರದಾಯಿಕ ಸಮಾಜ ಮತ್ತು ಆಡಳಿತದ ಉನ್ನತ ವರ್ಗ ಓರ್ವ ಮಹಿಳೆಯನ್ನು ಸರ್ವಾಧಿಕಾರಿಯನ್ನಾಗಿ ಒಪ್ಪಿಕೊಳ್ಳೋದು ತುಂಬಾ ಕಷ್ಟವಿದೆ.
ಇನ್ನು ಕಿಮ್ ಜಾಂಗ್ ಉನ್ ಪತ್ನಿ ರಿ ಸೊಲ್ ಜು ಕೂಡ ಸರ್ವಾಧಿಕಾರಿ ಪಟ್ಟದ ರೇಸ್ ನಲ್ಲಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು, ಅವರ ವಯಸ್ಸು ಮತ್ತು ಲಿಂಗದ ಬಗ್ಗೆ ಯಾವುದೇ ಮಾಹಿತಿಯಿಲ್ಲ.
ಒಟ್ಟಾರೆ ಕಿಮ್ ಜಾಂಗ್ ಉನ್ ಬಳಿಕ ಅವರ ಸಹೋದರಿ ಕಿಮ್ ಯೋ ಜಾಂಗ್, ಪತ್ನಿ ರಿ ಸೊಲ್ ಜು ಮತ್ತು ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ ಸಂಘಟನೆ ಮತ್ತು ಮಾರ್ಗದರ್ಶನ ವಿಭಾಗದ ಅಧ್ಯಕ್ಷರಾಗಿರುವ ಚೋ ರ್ಯೊಂಗ್ ಹೇ ನಡುವೆ ಸರ್ವಾಧಿಕಾರಿ ಪಟ್ಟಕ್ಕೆ ಲಾಬಿ ನಡೆಯಲಿದೆ. ಈ ಮೂವರಲ್ಲಿ ಯಾರಾದ್ರೂ ಒಬ್ಬರು ದೇಶದ ಆಡಳಿತದ ಚುಕ್ಕಾಣಿ ಹಿಡಿಯೋ ಸಾಧ್ಯತೆ ಇದೆ.








