ಮೌಂಟ್ ಅಬು – ಇದು ಮರುಭೂಮಿಯ ಒಯಾಸಿಸ್..! ರಾಜಸ್ಥಾನದ ಏಕೈಕ ಗಿರಿಧಾಮ..!
ರಾಜಸ್ಥಾನ ಹಲವು ಪ್ರವಾಸಿ ಸ್ಥಳಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ವಿಶೇಷತೆಗಳು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಜೈಪುರ್, ಉದಯಪುರ, ಜೋಧಪುರ, ಜೈಸಲ್ಮೇರ್, ಬಿಕಾನೇರ್, ಚಿತ್ತೋರ್ಘಡ್ ಹೀಗೆ ಒಂದೊಂದು ಸ್ಥಳವೂ ಅದ್ಭುತ. ಅದರಲ್ಲೂ ರಾಜಸ್ಥಾನದ ಏಕೈಕ ಗಿರಿಧಾಮವಾದ ಮೌಂಟ್ ಅಬು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.
ತನ್ನ ಸ್ವಾಭಾವಿಕವಾದ ಸೌಂದರ್ಯ, ಹಿತವಾದ ವಾತಾವರಣದಿಂದ ಕೂಡಿದ ಮೌಂಟ್ ಅಬು ಸಿರೋಹಿ ಜಿಲ್ಲೆಯಲ್ಲಿದೆ. ಈ ಸ್ಥಳವು ಜೈನರ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಅರಾವಳಿ ಪರ್ವತ ಶ್ರೇಣಿಯಲ್ಲಿರುವ ಈ ಗಿರಿಧಾಮವು ಸಮುದ್ರ ಮಟ್ಟದಿಂದ 1220 ಮೀಟರ್ ಎತ್ತರದಲ್ಲಿದೆ.
ಸರ್ಪದೇವತೆಯಿಂದ ಈ ಗಿರಿಧಾಮಕ್ಕೆ ಹೆಸರು ಬಂದಿದೆ..!
ದಂತ ಕತೆಗಳ ಪ್ರಕಾರ ಈ ಸರ್ಪ ದೇವತೆಯು ಪರಶಿವನ ವಾಹನವಾದ ನಂದಿಗೆ ರಕ್ಷಣೆ ಒದಗಿಸುವ ಸಲುವಾಗಿ ಇಲ್ಲಿಗೆ ಆಗಮಿಸಿತಂತೆ. ಅರ್ಬುದಾರಣ್ಯ ಹೆಸರು ಕಾಲನುಕ್ರಮದಲ್ಲಿ ಅಬು ಪರ್ವತ್ ಅಥವಾ ಮೌಂಟ್ ಅಬು ಎಂದು ಬದಲಾಯಿತು. ಐತಿಹಾಸಿಕವಾಗಿ ಈ ಸ್ಥಳವು ಗುರ್ಜರರ ಅಥವಾ ಗುಜ್ಜಾರರು ಮತ್ತು ಅವರಿಗೆ ಸಂಬಂಧಿಸಿದವರಿಗೆ ಸೇರಿತ್ತು ಎನ್ನಲಾಗುತ್ತದೆ.
ಮೌಂಟ್ ಅಬು ಧ್ಯಾನಕ್ಕೆ ಪ್ರಸಿದ್ಧಿ..!
ಮೌಂಟ್ ಅಬು ಪರಿಸರದಲ್ಲಿ ಪ್ರಜಾಪಿತ ಬಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಸೇರಿದ ಧ್ಯಾನಮಂದಿರವಿದೆ. ಇದು ಇರುವುದು ಪಾಂಡವ ಬನದಲ್ಲಿ. ಇಲ್ಲಿ ಒಂದೇ ಬಾರಿಗೆ ಸುಮಾರು 2000 ಜನರು ಆಸೀನರಾಗಬಹುದು. ಇಲ್ಲಿ, ಯೂನಿವರ್ಸಲ್ ಹಾರ್ಮೋನಿ ಹಾಲ್, ಶಾಂತಿ ಬನದ ಡೈಮಂಡ್ ಹಾಲ್ ಇದೆ. ಇಲ್ಲಿ ಒಂದೇಬಾರಿಗೆ ಸುಮಾರು 20 ಸಾವಿರ ಮಂದಿಗೆ ಭೋಜನ ತಯಾರಾಗುವಂತಹ ಪಾಕಶಾಲೆಯೂ ಇದೆ. ಈ ತಾಣ ಆಸ್ತಿಕರನ್ನಲ್ಲದೆ ಪ್ರವಾಸಿಗರನ್ನೂ ಆಕರ್ಷಿಸುತ್ತದೆ.
ಇದು ಮರುಭೂಮಿಯ ಒಯಾಸಿಸ್..!
ಪರ್ವತದ ತುದಿಯಲ್ಲಿ ವಿಷ್ಣುವಿನ ಪಾದದ ಗುರುತುಗಳಿವೆ ಎಂಬ ನಂಬಿಕೆಯೂ ಇದೆ. ಮೌಂಟ್ ಅಬುವಿನ ಹೊರಗೆ ಜಗತ್ ಎಂಬಲ್ಲಿರುವ ಬಂಡೆಯ ಸೀಳಿನಲ್ಲಿ ದುರ್ಗಾ ದೇವಾಲಯ, ಅಂಬಿಕಾ ಮಾತಾ ದೇವಾಲಯಗಳಿವೆ. ಮಾತ್ರವಲ್ಲ, ಈ ಪ್ರದೇಶದಲ್ಲಿ ಸೂಯಾಸ್ತವನ್ನು ಕಣ್ತುಂಬಿಕೊಳ್ಳಬಹುದು.
ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ, ನಕ್ಕಿ ಸರೋವರ. ಈ ಸರೋವರದ ಹತ್ತಿರದ ಬೆಟ್ಟವೊಂದರ ಮೇಲೆ ಕಪ್ಪೆಗಲ್ಲನ್ನು ಕಾಣಬಹುದು. ಈ ಕಲ್ಲು ಬೃಹದಾಕಾರದ ಕಪ್ಪೆಯಂತೆ ಕಾಣುವುದರಿಂದ ಇದಕ್ಕೆ ಕಪ್ಪೆಗಲ್ಲು ಎನ್ನಲಾಗಿದೆ. ಇದೊಂದು ಕುತೂಹಲ ಮೂಡಿಸುವ ಸ್ಥಳವಾಗಿದ್ದು, ರಘುನಾಥ ದೇವಾಲಯ, ಮಹಾರಾಜ ಜೈಪುರ್ ಅರಮನೆಗಳೂ ಸಹ ಬೆಟ್ಟದ ಮೇಲೆ ನಕ್ಕಿ ಸರೋವರದ ಬಳಿ ಇವೆ.
ಮೌಂಟ್ ಅಬು ಶಿಖರ ಗುಜರಾತ್ ನ ಪಾಲಂಪುರ ನಿಂದ 58 ಕಿಲೋ ಮೀಟರ್ ದೂರದಲ್ಲಿದೆ. ಉತ್ತರ ಅಹಮದಾಬಾದಿಗೆ 110 ಮೈಲಿ ದೂರದಲ್ಲಿದೆ. ಏಳು ಮೈಲಿ ಅಗಲವಾಗಿರುವ ಒಂದು ನದೀಕಣಿವೆ ಉಳಿದ ಬೆಟ್ಟಗಳ ಸಾಲಿನಿಂದ ಪರ್ವತವನ್ನು ಪ್ರತ್ಯೇಕಿಸಿದೆ. ಈ ಕಣಿವೆಯಲ್ಲಿ ಪಶ್ಚಿಮ ಬಾನಸ್ ಎಂಬ ನದಿ ಹರಿಯುವುದು. ಈ ಪರ್ವತ ಮೈದಾನದ ನಡುವೆ ಇರುವ ಕಡಿದಾದ ಗ್ರಾನೈಟ್ ಶಿಲಾದ್ವೀಪದಂತೆ ತೋರುವುದು. ಎತ್ತರ 4000ಅಡಿ ಗಳಿಂದ 5650 ಅಡಿಗಳ ವರೆಗೆ. ಈ ಪರ್ವತ, 22 ಕಿಲೋ ಮೀಟರ್ ಉದ್ದ ಮತ್ತು 9 ಕಿಲೋ ಮೀಟರ್ ವಿಸ್ತಾರವಿರುವ ಅಪರೂಪದ ಕಲ್ಲುಬಂಡೆಗಳಿಂದ ಕೂಡಿದ ಪ್ರಸ್ಥಭೂಮಿಯನ್ನು ರೂಪಿಸಿದೆ.
ಮೌಂಟ್ ಅಬು ವನ್ಯಜೀವಿ ಧಾಮವು ವಿಶೇಷವಾಗಿ ಸಸ್ಯ ಸಂಪತ್ತಿನ ಆಗರವಾಗಿದೆ. ಇದು 820 ಬಗೆಯ ಸಸ್ಯಗಳಿಗೆ ಆಶ್ರಯವನ್ನೊದಗಿಸಿದೆ. ಇಷ್ಟೇ ಅಲ್ಲದೆ ಈ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಆರ್ಕಿಡ್ ಹೂವುಗಳನ್ನು ಸಹ ನಾವು ಕಾಣಬಹುದು. ಇದರೊಂದಿಗೆ ಈ ವನ್ಯಜೀವಿ ಧಾಮದ ಸುತ್ತ –ಮುತ್ತ ಹಸಿರಿನಿಂದ ಕೂಡಿದ್ದು, ತನ್ನಲ್ಲಿರುವ ಪ್ರಾಣಿ ಸಂಪತ್ತಿಗಾಗಿ ಪ್ರಸಿದ್ಧಿ ಪಡೆದಿದೆ. ವನ್ಯಜೀವಿ ಪ್ರಿಯರು ಇಲ್ಲಿಗೆ ಇಲ್ಲಿನ ವಿಶಿಷ್ಟವಾದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ನೋಡಲು ಆಗಮಿಸುತ್ತಿರುತ್ತಾರೆ. ಹಿಂದೆ ಈ ಬೆಟ್ಟಗಳಲ್ಲಿ ಹುಲಿ ಮತ್ತು ಸಿಂಹಗಳು ಕಂಡುಬರುತ್ತಿದ್ದವು. ಆದರೆ ಈಗ ಕೇವಲ ಬೆಕ್ಕಿನ ಜಾತಿಯ ಮಾಂಸಾಹಾರಿ ಪ್ರಾಣಿಗಳು ಮಾತ್ರ ಕಂಡುಬರುತ್ತವೆ. ಅವುಗಳಲ್ಲಿ ಪ್ರಮುಖವಾದುದು ಚಿರತೆ. ಅಷ್ಟೇ ಅಲ್ಲದೆ ಈ ಧಾಮವು ಸಾಂಬರ್ ಜಿಂಕೆ, ಕಾಡು ಹಂದಿ, ಕರಡಿ, ನರಿ, ಭಾರತದ ಗುಳ್ಳೆ ನರಿ, ತೋಳ, ಕತ್ತೆ ಕಿರುಬ, ಭಾರತೀಯ ಪುನುಗು ಬೆಕ್ಕು ಮತ್ತು ಕಾಡು ಬೆಕ್ಕುಗಳಂತಹ ವಿಪುಲವಾದ ವನ್ಯಜೀವಿ ಗಳಿವೆ.
ಇಲ್ಲಿಗೆ ರಸ್ತೆ ಮಾರ್ಗವಾಗಿ ತಲುಪಲು ಗುಜರಾತ್ ಮತ್ತು ರಾಜಸ್ಥಾನದ ಕೆಲವು ಭಾಗಗಳಿಂದ ಬಸ್ಸುಗಳಿವೆ. ಅಥವಾ ಟೂರಿಸ್ಟ್ ಗಳಿಗಾಗಿ ಟ್ಯಾಕ್ಸಿ ಸೇವೆ ಲಭ್ಯವಿರುವಿದರಿಂದ ಅದರ ಮೂಲಕವೂ ಆಗಮಿಸಬಹುದು. ಇಲ್ಲಿಗೆ ವಿಮಾನ ಮಾರ್ಗದಲ್ಲಿ ತಲುಪಬೇಕೆಂದರೆ ,ಇಲ್ಲಿಂದ 185 ಕಿ,ಮೀ ದೂರದಲ್ಲಿರುವ ಉದಯ್ ಪುರಕ್ಕೆ ಬಂದು ಅಲ್ಲಿಂದ ಮೌಂಟ್ ಅಬುಗೆ ಬರಬಹುದು.