ಟೀಮ್ ಇಂಡಿಯಾ ಸೋಲಿಗೆ ಈ ಹತ್ತು ಎಡವಟ್ಟುಗಳೇ ಪ್ರಮುಖ ಕಾರಣ..!
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಪ್ರಶಸ್ತಿ ಗೆಲ್ಲುವ ವಿರಾಟ್ ಕೊಹ್ಲಿಯ ಕನಸು ಭಗ್ನವಾಗಿದೆ. ಆದ್ರೆ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.
ಹೆಚ್ಚುವರಿ ದಿನದ ಆಟದಲ್ಲಿ ನಾಟಕೀಯ ತಿರುವು ಪಡೆದ ಫೈನಲ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎಂಟು ವಿಕೆಟ್ ಗಳಿಂದ ಟೀಮ್ ಇಂಡಿಯಾವನ್ನು ಪರಾಭವಗೊಳಿಸಿತು. ಈ ಮೂಲಕ ನ್ಯೂಜಿಲೆಂಡ್ ಚೊಚ್ಚಲ ಪ್ರತಿಷ್ಠಿತ ಐಸಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. 2015ರ ವಿಶ್ವಕಪ್ ಫೈನಲ್, 2019ರ ವಿಶ್ವಕಪ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದ ಕೇನ್ ವಿಲಿಯಮ್ಸನ್ ಬಳಗ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಗೆಲುವಿನ ನಗೆ ಬೀರಿತ್ತು. ಇದರೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಪ್ರತಿಷ್ಠಿತ ಐಸಿಸಿ ಪ್ರಶಸ್ತಿ ಪಡೆದ ಹಿರಿಮೆಗೆ ವಿಲಿಯಮ್ಸನ್ ಪಾತ್ರವಾಗಿದೆ.
ಹಾಗೇ ನೋಡಿದ್ರೆ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದ್ರೆ ವಿರಾಟ್ ಬಳಗ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್ – ಬೌಲಿಂಗ್ ವಿಭಾಗದಲ್ಲಿ ನೀರಸ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಮುಖಭಂಗ ಅನುಭವಿಸಬೇಕಾಯ್ತು.
ಹಾಗಿದ್ರೆ ಟೀಮ್ ಇಂಡಿಯಾದ ಸೋಲಿಗೆ ಪ್ರಮುಖ ಕಾರಣಗಳು ಏನು ? ಈ ಪ್ರಶ್ನೆಗೆ ಸಿಂಪಲ್ ಉತ್ತರ, ಕೆಟ್ಟದಾಗಿ ಆಡಿದ್ದರು ಟೀಮ್ ಇಂಡಿಯಾ ಆಟಗಾರರು ಎಂದು ಹೇಳಬಹುದು. ಆದ್ರೂ ಕೆಲವೊಂದು ಕೆಟ್ಟ ಹೊಡೆತಗಳು, ಕೆಟ್ಟ ನಿರ್ಧಾರಗಳು, ಸಾಂಘಿಕ ಆಟದ ಕೊರತೆ, ನ್ಯೂಜಿಲೆಂಡ್ ನ ನಿಖರವಾದ ಬೌಲಿಂಗ್ ದಾಳಿ, ಮಳೆರಾಯನ ಅಡೆತಡೆ ಹೀಗೆ ಸಾಕಷ್ಟು ಕಾರಣಗಳು ಇವೆ.
ಕಾರಣ -1 ಕೈಕೊಟ್ಟ ಬ್ಯಾಟ್ಸ್ ಮೆನ್ ಗಳು
ಟೀಮ್ ಇಂಡಿಯಾದ ಸೋಲಿಗೆ ಮೊದಲ ಕಾರಣ ಕೈ ಕೊಟ್ಟ ಬ್ಯಾಟ್ಸ್ ಮೆನ್ ಗಳು.. ನ್ಯೂಜಿಲೆಂಡ್ ನ ಘಾತಕ ದಾಳಿಗೆ ದಿಟ್ಟ ಉತ್ತರ ನೀಡಲು ಟೀಮ್ ಇಂಡಿಯಾದ ಬ್ಯಾಟ್ಸ್ ಮೆನ್ ಗಳು ಸಂಪೂರ್ಣವಾಗಿ ವಿಫಲರಾದ್ರು.
ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಉತ್ತಮ ಆರಂಭ ನೀಡಲಿಲ್ಲ. ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಆದ್ಯತೆ ನೀಡಿದ್ರು. ಅದೇ ರೀತಿ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ನೆಲಕಚ್ಚಿ ನಿಂತು ಆಡಲಿಲ್ಲ. ನಾಯಕ ವಿರಾಟ್ ಕೊಹ್ಲಿಯ ಬ್ಯಾಟ್ ನಿಂದ ರನ್ ಗಳು ಹರಿದು ಬರಲಿಲ್ಲ. ರಹಾನೆಯ ರನ್ ಆಲಾಪಣೆ ನಡೆಸಲಿಲ್ಲ.
ಕಾರಣ -2- ಜವಾಬ್ದಾರಿ ಮರೆತ ರಿಷಬ್ ಪಂತ್..!
ಈ ನಡುವೆ, ರಿಷಬ್ ಪಂತ್ ಎರಡನೇ ಇನಿಂಗ್ಸ್ ನಲ್ಲಿ ಜೀವದಾನ ಪಡೆದುಕೊಂಡು ನ್ಯೂಜಿಲೆಂಡ್ ವೇಗದ ದಾಳಿಗೆ ದಿಟ್ಟ ಉತ್ತರವನ್ನು ನೀಡುತ್ತಿದ್ದರು. ಈ ಹಂತದಲ್ಲಿ ನೈಜ ಆಟವನ್ನಾಡಲು ಮುಂದಾದ ರಿಷಬ್ ಪಂತ್ ವಿಕೆಟ್ ಕೈಚೆಲ್ಲಿಕೊಂಡು ಬಿಟ್ರು. ಕ್ರೀಸ್‍ಗೆ ಅಂಟಿಕೊಂಡಿದ್ದ ರಿಷಬ್ ಪಂತ್ ತಂಡದ ಪರಿಸ್ಥಿತಿಯನ್ನು ಅರಿತುಕೊಂಡು ಆಡುವಲ್ಲಿ ವಿಫಲರಾದ್ರು.
ಕಾರಣ -3- ಸದ್ದು ಮಾಡದ ಜಸ್ಪ್ರಿತ್ ಬೂಮ್ರಾ..!
ಜಸ್ಪ್ರಿತ್ ಬೂಮ್ರಾ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್. ಆದ್ರೆ ಫೈನಲ್ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ವಿಕೆಟ್ ಕೂಡ ಪಡೆಯಲಿಲ್ಲ. ಒಂದೇ ಒಂದು ರನ್ ಕೂಡ ದಾಖಲಿಸಲಿಲ್ಲ. ಇಶಾಂತ್, ಶಮಿ ಮಾರಕ ದಾಳಿ ನಡೆಸಿದ್ರೂ ಬೂಮ್ರಾ ವಿಕೆಟ್ ಪಡೆಯುವಲ್ಲಿ ವಿಫಲರಾದ್ರು. ಆರ್. ಅಶ್ವಿನ್ ಮತ್ತು ಜಡೇಜಾ ಸ್ಪಿನ್ ಮ್ಯಾಜಿಕ್ ಕೂಡ ವರ್ಕ್ ಔಟ್ ಆಗಲಿಲ್ಲ.
ಕಾರಣ -4 -ಟೀಮ್ ಇಂಡಿಯಾಗೆ ಆಧಾರವಾಗದ ಕೆಳಕ್ರಮಾಂಕದ ಬ್ಯಾಟ್ಸ್ ಮೆನ್ ಗಳು..
ಇನ್ನು ಬ್ಯಾಟಿಂಗ್ ನಲ್ಲಿ ಹೇಳುವುದಾದ್ರೆ, ನ್ಯೂಜಿಲೆಂಡ್ ತಂಡದ ಮೊದಲ ಇನಿಂಗ್ಸ್ ನಲ್ಲಿ ಕೆಳಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ತಂಡಕ್ಕೆ ಆಧಾರವಾಗಿ ನಿಂತಿದ್ದರು. ಆದ್ರೆ ಟೀಮ್ ಇಂಡಿಯಾದ ಕೆಳಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಅಂದುಕೊಂಡಂತೆ ರನ್ ದಾಖಲಿಸಲಿಲ್ಲ. ಅಶ್ವಿನ್, ರವಿಂದ್ರ ಜಡೇಜಾ, ಇಶಾಂತ್ ಶರ್ಮಾ, ಮಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲುವ ಮನಸ್ಸು ಮಾಡಲಿಲ್ಲ. ಅದಕ್ಕೆ ನ್ಯೂಜಿಲೆಂಡ್ ವೇಗಿಗಳು ಅವಕಾಶವನ್ನೇ ನೀಡಲಿಲ್ಲ.
ಕಾರಣ -5 – ನಿರಾಸೆಗೊಳಿಸಿದ ಆರಂಭಿಕ ಶುಬ್ಮನ್ ಗಿಲ್
ಇನ್ನೊಂದೆಡೆ ಟೀಮ್ ಇಂಡಿಯಾದ ಯುವ ಆರಂಭಿಕ ಶುಬ್ಮನ್ ಗಿಲ್ ಮತ್ತೆ ನಿರಾಸೆಗೊಳಿಸಿದರು. ಏಳು ಟೆಸ್ಟ್ ಪಂದ್ಯಗಳಲ್ಲಿ ಎರಡು ಅರ್ಧಶತಕ ದಾಖಲಿಸಿರುವ ಗಿಲ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಉತ್ತಮ ಫಾರ್ಮ್ ನಲ್ಲಿ ಇರದಿದ್ರೂ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದ ಗಿಲ್ ನಿರೀಕ್ಷಿತ ಆಟ ಹೊರಬರಲಿಲ್ಲ.
ಕಾರಣ -6 -ಟೀಮ್ ಇಂಡಿಯಾದ ನಾಲ್ವರು ಸ್ಟಾರ್ ಬ್ಯಾಟ್ಸ್ ಮೆನ್ ಗಳ ವೈಫಲ್ಯ..!
ಟೀಮ್ ಇಂಡಿಯಾ ಹೆಚ್ಚು ನಂಬಿಕೊಂಡಿದ್ದು ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಮತ್ತು ಉಪನಾಯಕ ಅಜಿಂಕ್ಯಾ ರಹಾನೆ ಅವರನ್ನು. ಆದ್ರೆ ಈ ನಾಲ್ವರು ಬ್ಯಾಟ್ಸ್ ಮೆನ್ ಗಳಲ್ಲಿ ಒಬ್ಬರು ಕೂಡ ಆಧಾರಸ್ತಂಭವಾಗಲಿಲ್ಲ. ಹೀಗಾಗಿ ಒತ್ತಡಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ರನ್ ಗಳಿಸಲು ಸಂಪೂರ್ಣವಾಗಿ ವಿಫಲವಾಯ್ತು.
ಕಾರಣ -7 -ಟೀಮ್ ಇಂಡಿಯಾಗೆ ಅಭ್ಯಾಸದ ಕೊರತೆಯೇ ಮುಳುವಾಗಿ ಹೋಯ್ತಾ ?
ಇನ್ನು ಟೀಮ್ ಇಂಡಿಯಾಗೆ ಅಭ್ಯಾಸದ ಕೊರತೆ ಮುಳುವಾಗಿ ಹೋಯ್ತು ಎಂಬ ಕಾರಣವನ್ನು ನೀಡಬಹುದು. ಆದ್ರೆ ಅದೇ ಪ್ರಮುಖ ಕಾರಣ ಅಂತ ಹೇಳೋಕೆ ಆಗಲ್ಲ. ಇಂಗ್ಲೆಂಡ್ ಸರಣಿ, ಐಪಿಎಲ್ ಆಡಿದ್ರೂ ಇಂಗ್ಲೆಂಡ್ ನಲ್ಲಿ ಅಭ್ಯಾಸ ಪಂದ್ಯವನ್ನು ಆಡಲಿಲ್ಲ. ಕೊರೋನಾ, ಲಾಕ್ ಡೌನ್, ಕ್ವಾರಂಟೈನ್, ಜೈವಿಕ ಸುರಕ್ಷತೆ ಹೀಗೆ ಕಾರಣಗಳನ್ನು ನೀಡಬಹುದು. ಆದ್ರೆ ಸೋತ ಮೇಲೆ ಈ ಕಾರಣಗಳನ್ನು ಹೇಳುವುದು ಸಮಂಜಸವಲ್ಲ.
ಕಾರಣ -8- ನ್ಯೂಜಿಲೆಂಡ್ ಬೌಲಿಂಗ್ ದಾಳಿಗೆ ಸಿದ್ಧತೆ ಮಾಡಿಕೊಳ್ಳದ ಟೀಮ್ ಇಂಡಿಯಾ..!
ಇನ್ನೊಂದೆಡೆ ಟೀಮ್ ಇಂಡಿಯಾ ನ್ಯೂಜಿಲೆಂಡ್ ನ ಬೌಲಿಂಗ್ ದಾಳಿಯನ್ನು ಎದುರಿಸಲು ಪೂರ್ವತಯಾರಿ ಮಾಡಿಕೊಳ್ಳಲು ವಿಫಲವಾಗಿದೆ. ಈ ಹಿಂದಿನ ಟೆಸ್ಟ್ ಸರಣಿಯಲ್ಲೂ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ವೇಗಿಗಳುಉ ಮಾರಕವಾಗಿ ಕಾಡಿದ್ರು.
ಕಾರಣ -9 ಅತೀಯಾದ ಆತ್ಮವಿಶ್ವಾಸವೇ ಟೀಮ್ ಇಂಡಿಯಾಗೆ ಮುಳುವಾಗಿ ಹೋಯ್ತಾ ?
ಏತನ್ಮಧ್ಯೆ, ಟೀಮ್ ಇಂಡಿಯಾಗೆ ಅತೀಯಾದ ಆತ್ಮವಿಶ್ವಾಸ ಮುಳುವಾಗಿ ಹೋಯ್ತು. ಗೆದ್ದೇ ಗೆಲ್ಲುತ್ತೇವೆ ಅನ್ನೋ ಭ್ರಮೆಯಲ್ಲಿ ಮುಳುಗಿದ್ದ ಟೀಮ್ ಇಂಡಿಯಾದ ಹನ್ನೊಂದರ ಬಳಗದ ಆಯ್ಕೆಯೂ ಸರಿಯಾಗಿರಲಿಲ್ಲ ಅನ್ಸುತ್ತೆ. ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಹನ್ನೊಂದರ ಬಳಗದಲ್ಲಿರಬೇಕಿತ್ತು ಎಂದು ಈಗ ಅನ್ನಿಸಿರಲು ಸಾಕು.
ಕಾರಣ 10- ಫೈನಲ್ ಪಂದ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದ ಮಳೆರಾಯ.
ಇನ್ನು ಕೊನೆಯದಾಗಿ ಮಳೆರಾಯನ ಅಡೆತಡೆ. ಮೊದಲ ದಿನ ಪೂರ್ತಿಯಾಗಿ ಪಂದ್ಯ ಮಳೆಗೆ ಆಹುತಿಯಾಯ್ತು. ಎರಡನೇ ದಿನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದು ಕೂಡ ವಿರಾಟ್ ಪಡೆಗೆ ಹಿನ್ನಡೆಯಾಯ್ತು. ನಾಲ್ಕು ಮತ್ತು ಐದನೇ ದಿನ ಮತ್ತೆ ಮಳೆರಾಯನ ಅಡ್ಡಿ. ಹೆಚ್ಚುವರಿ ದಿನ ಒತ್ತಡಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಸೋಲು ಅನುಭವಿಸಬೇಕಾಯ್ತು.
ಒಟ್ಟಿನಲ್ಲಿ ಟೀಮ್ ಇಂಡಿಯಾ ಈಗ ಸೋತಿದೆ. ಹೀಗಾಗಿ ಅನೇಕ ಕಾರಣಗಳು ಸಿಗುತ್ತವೆ. ಒಂದು ವೇಳೆ ಗೆಲ್ಲುತ್ತಿದ್ರೆ ಈ ಎಲ್ಲಾ ತಪ್ಪುಗಳು ಮರೆ ಮಾಚುತ್ತಿದ್ದವು. ಏನೇ ಆದ್ರೂ ಟೀಮ್ ಇಂಡಿಯಾಗಿಂತ ನ್ಯೂಜಿಲೆಂಡ್ ತುಂಬಾ ಚೆನ್ನಾಗಿಯೇ ಆಡಿದ್ದರು. ಅರ್ಹವಾಗಿಯೇ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದಾರೆ.