ವಿಶ್ವನಾಥ್ ರನ್ನ ಕರೆದು ಪಕ್ಷದ ಸಿದ್ಧಾಂತ ಬಗ್ಗೆ ತಿಳಿಸುತ್ತೇನೆ : ಕಟೀಲ್
ರಾಯಚೂರು : ನಮ್ಮ ಪಕ್ಷದ ಹೆಚ್ ವಿಶ್ವನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರು ಇತ್ತೀಚೆಗೆ ನಮ್ಮ ಪಾರ್ಟಿಗೆ ಸೇರಿದ್ದಾರೆ. ಅವರನ್ನು ಕರೆದು ನಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ತಿಳಿ ಹೇಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ವಿಶ್ವನಾಥ್ ಆರೋಪದ ಬಗ್ಗೆ ರಾಯಚೂರಿನಲ್ಲಿ ಮಾತನಾಡಿದ ಕಟೀಲ್, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಊಹಾಪೋಹಗಳ ಮೂಲಕ ನಾನು ಉತ್ತರ ಕೊಡೋಕೆ ಆಗಲ್ಲ. ಎಲ್ಲರ ಹತ್ತಿರ ನಾನೂ ಮಾತನಾಡಿದ್ದೇನೆ, ಅರುಣ್ ಸಿಂಗ್ ಮಾತನಾಡಿದ್ದಾರೆ ಎಂದರು. ಅಲ್ಲದೆ ವಿಶ್ವನಾಥ್ ಇತ್ತೀಚೆಗೆ ನಮ್ಮ ಪಕ್ಷ ಸೇರಿದ್ದು, ಅವರನ್ನು ಕರೆದು ಪಕ್ಷದ ಸಿದ್ಧಾಂತದ ಬಗ್ಗೆ ತಿಳಿ ಹೇಳುತ್ತೇವೆ ಎಂದು ಹೇಳಿದರು.
ಇದೇ ವೇಳೆ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಗೆ ಆರೋಪದ ಬಗ್ಗೆ ಮಾತನಾಡಿ, ಆ ವಿಚಾರ ತನಿಖಾ ಹಂತದಲ್ಲಿದೆ ಸರ್ಕಾರ ಅದನ್ನ ನೋಡಿಕೊಳ್ಳುತ್ತದೆ. ನಾನು ಉತ್ತರ ಕೊಡುವುದು ಸರಿಯಲ್ಲ. ಪ್ರತಿ ಜನಪ್ರತಿನಿಧಿಗೂ ಸ್ವಾತಂತ್ರ್ಯವಿದೆ. ಅವರು ಯಾವ ಮಸೀದಿ, ದೇವಸ್ಥಾನ, ಮಠಕ್ಕೂ ಹೋಗಬಹುದು ಅಂತ ಹೇಳಿದರು.
ಇವತ್ತು ಪ್ರಶ್ನೆ ಮಾಡಬೇಕಾಗಿರುವುದು ಸೋತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಬಗ್ಗೆ. ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಜಗಳ ಪ್ರಾರಂಭ ಮಾಡಿದ್ದಾರೆ. ಪಕ್ಷದಲ್ಲಿ ಖುರ್ಚಿ ಹೋರಾಟ ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.








