ಬಾಗಲಕೋಟೆ : ಹಾವು ಕಚ್ಚಿ ಉರಗ ತಜ್ಞ ಸಾವು bagalakote
ಬಾಗಲಕೋಟೆ : ತಾನು ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡು ಉರಗ ತಜ್ಞ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸಮೀಪ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ. 30 ವರ್ಷ ಪ್ರಾಯದ ಸದಾಶಿವ ನಿಂಗಪ್ಪ ಕರಣಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ಬುಧವಾರ ರಾತ್ರಿ ಸದಾಶಿವ ನಿಂಗಪ್ಪ ಕರಣಿ ಅವರ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು, ನಂತರ ವಿಷಯ ತಿಳಿದ ಸದಾಶಿವ ಕರಣಿ, ಅಲ್ಲಿಗೆ ತೆರಳಿ ಹಾವನ್ನು ಹಿಡಿದಿದ್ದರು. ಹಾವನ್ನು ಹಿಡಿಯುವ ವೇಳೆ ಸದಾಶಿವ ಅವರಿಗೆ ಹಾವು ಕಚ್ಚಿದೆ. ಹಾವನ್ನು ಹಿಡಿದ ಬಳಿಕ ಎಂದಿನಂತೆ ಸದಾಶಿವ ಅವರು ಮನೆಯಲ್ಲಿಯೇ ಗಿಡಮೂಲಿಕೆಗಳ ಔಷಧಿ ತೆಗೆದುಕೊಂಡಿದ್ದರು. ಆದರೆ ನಿನ್ನೆ ತಡರಾತ್ರಿ ಹಾವಿನ ವಿಷ ಹೆಚ್ಚಾಗಿ ಸಾವನ್ನಪ್ಪಿದ್ದಾರೆ.
ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







