ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ – ಗರಿಷ್ಠ ವಿಕೆಟ್ ಪಡೆದ ಸಾಧನೆಯ ಪಟ್ಟಿಯಲ್ಲಿ ಅಶ್ವಿನ್..!
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಸೋತಿದೆ. ಆದ್ರೂ ಟೀಮ್ ಇಂಡಿಯಾದ ಕೆಲವು ಆಟಗಾರರು ತಮ್ಮ ವೈಯಕ್ತಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಮೂರು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಅದೇ ರೀತಿ ಟೀಮ್ ಇಂಡಿಯಾ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಕೂಡ ಅದ್ಭುತವಾದ ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲೂ ಅಶ್ವಿನ್ ಅವರು ತಲಾ ಎರಡು ವಿಕೆಟ್ ಗಳೊಂದಿಗೆ ಒಟ್ಟು 4 ವಿಕೆಟ್ ಗಳನ್ನು ಕಬಳಿಸಿದ್ದರು.
ಈ ಮೂಲಕ ಆರ್. ಅಶ್ವಿನ್ ಅವರು ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆಗೆ ಪಾತ್ರರಾಗಿದ್ದಾರೆ. ಫೈನಲ್ ಪಂದ್ಯಕ್ಕೆ ಮುನ್ನ ಅಶ್ವಿನ್ 67 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದರು. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 70 ವಿಕೆಟ್ ಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರು. ಪ್ಯಾಟ್ ಕಮಿನ್ಸ್ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಈಗ ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಎರಡನೇ
ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು 17 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟುವರ್ಟ್ ಬ್ರಾಡ್ ಅವರು 69 ವಿಕೆಟ್ ಗಳನ್ನು ಪಡೆದುಕೊಂಡು ಈಗ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.
ಆರ್. ಅಶ್ವಿನ್ ಅವರು ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಆಲ್ ರೌಂಡ್ ಆಟವನ್ನು ಕೂಡ ಪ್ರದರ್ಶಿಸಿದ್ದಾರೆ. ನಾಲ್ಕು ಬಾರಿ ಐದಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವ ಅಶ್ವಿನ್ 145ಕ್ಕೆ ಏಳು ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ. ಹಾಗೇ ಬ್ಯಾಟಿಂಗ್ ನಲ್ಲೂ ತಂಡಕ್ಕೆ ಆಧಾರವಾಗಿ ನಿಂತಿರುವ ಅಶ್ವಿನ್ ಒಂದು ಶತಕ ಸೇರಿ ಒಟ್ಟು 324 ರನ್ ಕೂಡ ಕಲೆ ಹಾಕಿದ್ದಾರೆ.








