ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ : ಅವಳಿ ಸ್ಫೋಟ – ಪಾಕ್ ಮೇಲೆ ಅನುಮಾನ
ಜಮ್ಮು: ಜಮ್ಮು ವಾಯು ನೆಲೆಯ ಮೇಲೆ ನಸುಕಿನ ಜಾವದಲ್ಲಿ ಎರಡು ಸ್ಫೋಟ ಸಂಭವಿಸಿದೆ. ಟೆಕ್ನಿಕಲ್ ಪ್ರದೇಶದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ಬೆಳಗ್ಗೆ 1:45ಕ್ಕೆ ಮೊದಲ ಸ್ಫೋಟ ಸಂಭವಿಸಿದೆ. ಈ ಸ್ಫೋಟ ಸಂಭವಿಸಿದ 5 ನಿಮಿಷದಲ್ಲಿ ತೆರೆದ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮೇಲ್ಭಾಗ ಒಡೆದು ಹೋಗಿದೆ. ಈ ಸ್ಫೋಟದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ಸುಧಾರಿತ ಸ್ಫೋಟಕ ಸಾಧನ ಬಳಸಿ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರದ ತಜ್ಞರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಮ್ಮು ವಿಮಾನ ನಿಲ್ದಾಣಕ್ಕೆ ಸತ್ವಾರಿ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಇಲ್ಲಿ ನಾಗರಿಕ ವಿಮಾನಗಳು ಲ್ಯಾಂಡ್ ಆದರೂ ಏರ್ ಟ್ರಾಫಿಕ್ ಕಟ್ರೋಲ್(ಎಟಿಸಿ) ಭಾರತೀಯ ವಾಯುಪಡೆಯ ನಿಯಂತ್ರಣದಲ್ಲಿದೆ.
ಈ ವಿಮಾನ ನಿಲ್ದಾಣ ಜಮ್ಮು ತಾವಿ ರೈಲು ನಿಲ್ದಾಣದಿಂದ 6 ಕಿ.ಮೀ, ಪಂಜಾಬ್‍ನ ಪಠಾಣ್‍ಕೋಟ್ ವಿಮಾನ ನಿಲ್ದಾಣದಿಂದ 110 ಕಿ.ಮೀ ಮತ್ತು ರಾಷ್ಟ್ರೀಯ ಹೆದ್ದಾರಿ 1 ರಿಂದ 1 ಕಿ.ಮೀ ದೂರದಲ್ಲಿದೆ. ಇನ್ನೂ ಭಾರತೀಯ ವಾಯುಸೇನೆಗೆ ಸೇರಿದ ನಾಗರೀಕ ವಿಮಾನ ನಿಲ್ದಾಣದ ರನ್ ವೇ ಮತ್ತು ವಾಯುಸಂಚಾರ ನಿಯಂತ್ರಣ ಕೊಠಡಿಯ ಮೇಲೆ ದಾಳಿ ನಡೆಸಲು ಇದೇ ಮೊದಲ ಭಾರಿಗೆ ಡ್ರೋಣ್ ಗಳನ್ನು ಬಳಸಿ ಸ್ಫೋಟಕಗಳನ್ನು ಎಸೆಯಲಾಗಿದೆ. ಕಡಿಮೆ ತೀವ್ರತೆಯ ಎರಡು ಸ್ಪೋಟಕಗಳನ್ನು ಇದಕ್ಕಾಗಿ ಬಳಸಿರುವ ಅನುಮಾನಗಳಿವೆ.
ಒಂದು ಸ್ಫೋಟದಿಂದ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದೆ. ವಿಮಾನಗಳನ್ನು ನಿಲ್ಲಿಸುವ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಉದ್ದೇಶವನ್ನುವನ್ನು ದಾಳಿಕೋರರು ಹೊಂದಿದ್ದರು, ಆದರೆ ಗೋಡೆ ಅಡ್ಡಲಾಗಿದ್ದರಿಂದ ಉದ್ದೇಶಿತ ಗುರಿ ಬಹಳ ದೂರ ಎನಿಸಿ ಹತ್ತಿರದಲ್ಲೇ ಸ್ಫೋಟಿಸಿರಬಹುದು ಎಂದು ರಕ್ಷಣೆ ಮತ್ತು ಭದ್ರತಾ ಸಂಸ್ಥೆಯ ಅಂದಾಜಿಸಿದೆ.
ಈ ಮೊದಲು ಪಾಕಿಸ್ತಾನ, ಪಂಜಾಬ್ ಮತ್ತು ಜಮ್ಮು ಕಾಶ್ಮಿರದ ಉಗ್ರರಿಗೆ ಆಯುಧ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸಲು ಡ್ರೋಣ್ ಗಳನ್ನು ಬಳಸಿತ್ತು. ಇದೇ ಮೊದಲ ಬಾರಿಗೆ ಪಾಕಿಸ್ತಾನ ಡ್ರೋಣ್ ಗಳನ್ನು ಬಳಸಿ ಬಾಂಬ್ ಸ್ಫೋಟದಂತಹ ದುಷ್ಕೃತ್ಯ ನಡೆಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಿಂದ ವಾಯು ಸೇನಾ ನೆಲೆ 14 ಕಿಲೋಮೀಟರ್ ದೂರವಿದೆ. ಹಿಂದಿನ ಘಟನೆಯಲ್ಲಿ 12 ಕಿಲೋ ಮೀಟರ್ ಅಂತರದಲ್ಲಿ ಡ್ರೋಣ್ ಗಳನ್ನು ಹಾರಿಸಿ ಭಾರತದೊಳಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮಾಡಲಾಗಿತ್ತು. ನೆರೆ ರಾಷ್ಟ್ರದ ಗಡಿಯಲ್ಲಿ 2019ರ ಆಗಸ್ಟ್ 13ರಂದು ಪೊಲೀಸರು ಹೆಲಿಕಾಫ್ಟರ್ ಡ್ರೋಣ್ ಗಳನ್ನು ವಶ ಪಡಿಸಿಕೊಂಡಿದ್ದರು.








