ಕರ್ನಾಟಕ ಇತಿಹಾಸದಲ್ಲೇ ಯಡಿಯೂರಪ್ಪ ಭ್ರಷ್ಟ ಮುಖ್ಯಮಂತ್ರಿ
ಬೆಂಗಳೂರು : ಇಡೀ ಕರ್ನಾಟಕ ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಇದ್ದಾರೆ ಎಂದರೆ ಅದು ಯಡಿಯೂರಪ್ಪ ಮಾತ್ರ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಸಿಎಂ ನಿರ್ಧರಿಸಿರುವುದು ದುರುದ್ದೇಶದಿಂದ ಎಂದು ಆರೋಪಿಸಿ ವಾಟಾಳ್ ನಾಗರಾಜ್ ಇಂದು ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನ ಕಂಚಿನ ಪ್ರತಿಮೆಯ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಮತ್ತೊಂದು ಬಸವಣ್ಣನ ಪ್ರತಿಮೆ ಬೇಡ, ಈಗಾಗಲೇ ಬಸವಣ್ಣನ ಪ್ರತಿಮೆ ಇದೆ. ಈಗ ಇದ್ದಕಿದ್ದ ಹಾಗೆ ಬಸವಣ್ಣನ ಪ್ರತಿಮೆ ಸ್ಥಾಪಿಸಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಚಿಂತನೆ ಏನು? ಅದರ ಹಿಂದಿನ ರಾಜಕೀಯ ಉದ್ದೇಶವಾದರೂ ಎಂಥದ್ದು? ವಿಧಾನಸೌಧ ಈಗ ಭ್ರಷ್ಟರ ಸೌಧವಾಗಿದೆ, ಸರ್ಕಾರದ ಕೆಲಸ ದೇವರ ಕೆಲಸ ಹೋಗಿ ಸರ್ಕಾರದ ಕೆಲಸ ಲಂಚದ ಕೆಲಸ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧ ಈಗ ಭ್ರಷ್ಟರ ಸೌಧ, ನೀವು ಭ್ರಷ್ಟ ಮುಖ್ಯಮಂತ್ರಿ, ನಿಮ್ಮ ಮಂತ್ರಿಮಂಡಲ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ನಿಮ್ಮ ಕೈಯಲ್ಲಿ ಬಸವಣ್ಣನ ಪ್ರತಿಮೆ ಅದೂ ವಿಧಾನಸೌಧದಲ್ಲಿ ಆಗಬಾರದು.ಇಡೀ ಕರ್ನಾಟಕ ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಇದ್ದಾರೆ ಎಂದರೆ ಅದು ಯಡಿಯೂರಪ್ಪ ಮಾತ್ರ ಎಂದು ವಾಗ್ದಾಳಿ ನಡೆಸಿದರು.