ಮಿಥಾಲಿ ರಾಜ್.. ವಿಶ್ವ ಮಹಿಳಾ ಕ್ರಿಕೆಟ್‍ನ ಮಹಾನ್ ಸಾಧಕಿ.. ಗರಿಷ್ಠ ರನ್ ಗಳಿಕೆಯ ಒಡತಿ..!
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೊಂದು ಸಾಧನೆಯ ಮೆಟ್ಟಿಲೇರಿದ್ದಾರೆ. ಹಾಗಂತ ಇದೇನು ಅಂತಿಂಥ ಸಾಧನೆಯಲ್ಲ. ವಿಶ್ವ ಮಹಿಳಾ ಕ್ರಿಕೆಟ್ ನಲ್ಲಿ ಐತಿಹಾಸಿಕ ದಾಖಲೆ ಬರೆದ ಸಾಧನೆಯಾಗಿದೆ.
ಹೌದು, ಮಿಥಾಲಿ ರಾಜ್ ಈಗ ಮಹಿಳಾ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯವನ್ನೇ ದಾಖಲಿಸಿದ್ದಾರೆ. ವಿಶ್ವ ಮಹಿಳಾ ಕ್ರಿಕೆಟ್ ನ ಮೂರು ಮಾದರಿಯಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಅಗ್ರಮಾನ್ಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ಈ ಸಾಧನೆ ಮಾಡಿದ್ದಾರೆ. ಏಕದಿನ ಸರಣಿಗಳಲ್ಲಿ ಸತತ ಅರ್ಧಶತಕ ದಾಖಲಿಸಿದ್ದ ಮಿಥಾಲಿ ರಾಜ್ ಮೂರನೇ ಏಕದಿನ ಪಂದ್ಯದಲ್ಲೂ ಅಜೇಯ 75 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಈ ನಡುವೆ ಮಿಥಾಲಿ ರಾಜ್ ಅವರು ಮೂರು ಮಾದರಿಯ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಇಂಗ್ಲೆಂಡ್ ನ ಮಾಜಿ ನಾಯಕಿ ಚಾರ್ಲೊಟ್ ಎಡ್ವಡ್ರ್ಸ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ರು. ಚಾರ್ಲೊಟ್ಸ್ ಎಡ್ವಡ್ರ್ಸ್ ಅವರು ಒಟ್ಟು 10,273 ರನ್ ದಾಖಲಿಸಿದ್ದರು. 23 ಟೆಸ್ಟ್ ಪಂದ್ಯಗಳಲ್ಲಿ 1676 ರನ್, 191 ಏಕದಿನ ಪಂದ್ಯಗಳಲ್ಲಿ 5992 ಹಾಗೂ 95 ಟಿ-ಟ್ವೆಂಟಿ ಪಂದ್ಯಗಳಲ್ಲಿ 2605 ರನ್ ಗಳಿಸಿದ್ದರು.
ಇನ್ನು ಮಿಥಾಲಿ ರಾಜ್ ಅವರು 11 ಟೆಸ್ಟ್ ಪಂದ್ಯಗಳಲ್ಲಿ 669 ರನ್ ಹಾಗೂ 217 ಏಕದಿನ ಪಂದ್ಯಗಳಲ್ಲಿ 7304 ಮತ್ತು 89 ಟಿ-20 ಪಂದ್ಯಗಳಲ್ಲಿ 2364 ರನ್ ಗಳೊಂದಿಗೆ ಒಟ್ಟು 10,317 ರನ್ ದಾಖಲಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಆಟವನ್ನು ಆಡಿರುವ ಮಿಥಾಲಿ ರಾಜ್ ಈಗ ಐಸಿಸಿ ಏಕದಿನ ಶ್ರೇಯಾಂಕಪಟ್ಟಿಯಲ್ಲಿ ಟಾಪ್ -5 ನಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಮಾಜಿ ನಂಬರ್ ವನ್ ಆಟಗಾರ್ತಿಯಾಗಿರುವ ಮಿಥಾಲಿ ರಾಜ್ ಅವರು 2019ರ ನಂತರ ಮತ್ತೆ ಐಸಿಸಿ ಶ್ರೇಯಾಂಕಪಟ್ಟಿಯ ಟಾಪ್ -5 ನಲ್ಲಿ ಕಾಣಿಸಿಕೊಂಡಿದ್ದಾರೆ.
39ರ ಹರೆಯದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಯಾಗಿ 22 ವರ್ಷಗಳಾಗಿವೆ. ಮುಂದಿನ ವಿಶ್ವ ಕಪ್ ಟೂರ್ನಿಯನ್ನು ಆಡುವ ಇರಾದೆಯನ್ನು ಹೊಂದಿರುವ ಮಿಥಾಲಿ ರಾಜ್ ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ.
ಒಟ್ಟಿನಲ್ಲಿ ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದ ಆಟಗಾರ್ತಿ ಎಂಬುದರಲ್ಲಿ ಎರಡು ಮಾತಿಲ್ಲ.