ನವದೆಹಲಿ : ದೇಶದಲ್ಲಿನ ಕೊರೊನಾ ಪರಿಸ್ಥಿತಿ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ತಿರುಚಿದ್ದಾರೆಂದು ಆರೋಪಿಸಿ ಛತ್ತೀಸ್ ಗಢದಲ್ಲಿ ಹಲವು ದೂರುಗಳು ದಾಖಲಾಗಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
“ರಾಹುಲ್ ಗಾಂಧಿ ಅವರು ಏಪ್ರಿಲ್ 16ರಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಲಾಕ್ ಡೌನ್ ಮಾತ್ರ ಪರಿಹಾರವಲ್ಲ, ಬದಲಾಗಿ ಅದನ್ನು ನಿಲ್ಲಿಸುವ ಬಟನ್ ಆಗಿದೆ ಎಂದು ಹೇಳಿದ್ದರು. ಇದಲ್ಲದೆ ದೇಶದಲ್ಲಿ ಕೊರೊನಾ ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಬೇಕೆಂದೂ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ ಮೋದಿ ಸರಕಾರದ ಕೊರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಕೂಡ ಘೋಷಿಸಿದ್ದರು. ಆದರೆ ಅರ್ನಬ್ ತಮ್ಮ ಪ್ರೈಮ್ ಟೈಮ್ ಶೋನಲ್ಲಿ ರಾಹುಲ್ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿ ಛತ್ತೀಸ್ ಗಢದ ಕಾಂಗ್ರೆಸ್ ನಾಯಕರು
ಅರ್ನಬ್ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಅರ್ನಬ್ ಹಾಗೂ ಅವರಂತಹ ಸುದ್ದಿ ವಾಹಿನಿ ನಿರೂಪಕರು ಬಿತ್ತರಿಸುವ ಕಾರ್ಯಕ್ರಮಗಳಿಂದಾಗಿಯೇ ಪ್ರತಿ ದಿನ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ಮೇಲೆ ದೇಶದಲ್ಲಿ ಹಲ್ಲೆಗಳು ನಡೆಯುತ್ತಿವೆ” ಎಂದು ಛತ್ತೀಸ್ ಗಢ ಕಾಂಗ್ರೆಸ್ಸಿನ ಮಾಧ್ಯಮ ಘಟಕದ ಮುಖ್ಯಸ್ಥ ಶೈಲೇಶ್ ನಿತಿನ್ ತ್ರಿವೇದಿ ಆರೋಪಿಸಿದ್ದಾರೆ.








