ರಾಹುಲ್ ದ್ರಾವಿಡ್ ಸರ್ ಜೊತೆಗಿರುವಾಗ ಭಯವಿಲ್ಲ ಎನಗೆ…ಇದು ಪೃಥ್ವಿ ಶಾ ಹೃದಯದ ಮಾತು..!
ರಾಹುಲ್ ಸರ್ ಇದ್ರೆ ಡ್ರೆಸಿಂಗ್ ರೂಮ್ ನಲ್ಲಿ ಒಂದು ರೀತಿಯ ಶಿಸ್ತು ಇರುತ್ತೆ. ರಾಹುಲ್ ಸರ್ ಜೊತೆಯಲ್ಲಿರುವಾಗ ಒಂದು ರೀತಿಯ ಮಜಾ ಇರುತ್ತೆ. ಖುಷಿ ಇರುತ್ತೆ.. ಹಾಗಂತ ಹೇಳಿದ್ದು ಟೀಮ್ ಇಂಡಿಯಾದ ಭರವಸೆಯ ಆರಂಭಿಕ ಆಟಗಾರ ಪೃಥ್ವಿ ಶಾ.
19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ಕಿರಿಯರ ತಂಡದ ನಾಯಕನಾಗಿದ್ದ ಪೃಥ್ವಿ ಶಾ ಅವರು ರಾಹುಲ್ ದ್ರಾವಿಡ್ ಗುರುಕುಲದಲ್ಲಿ ಪಳಗಿದವರು. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪೃಥ್ವಿ ಶಾ ಒಬ್ಬ ಕ್ರಿಕೆಟಿಗನಾಗಿ ರೂಪುಗೊಂಡಿದ್ದಾರೆ. ರಾಹುಲ್ ದ್ರಾವಿಡ್ ಕೋಚಿಂಗ್ ಸ್ಟೈಲ್, ದ್ರಾವಿಡ್ ಅವರ ಮಾರ್ಗದರ್ಶನ ಹಾಗೂ ದ್ರಾವಿಡ್ ಸಹ ಆಟಗಾರರೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡಿರುವ ರೀತಿಗೆ ಪೃಥ್ವಿ ಶಾ ಹೆಮ್ಮೆಯಿಂದಲೇ ತಾನು ರಾಹುಲ್ ದ್ರಾವಿಡ್ ಅವರ ಶಿಷ್ಯ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಪೃಥ್ವಿ ಶಾ ಈಗ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಶ್ರೀಲಂಕಾಗೆ ಪ್ರಯಾಣ ಬೆಳೆಸುವ ಮುನ್ನ ಪೃಥ್ವಿ ಶಾ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನ ಸಾರಂಶ ಇಲ್ಲಿದೆ.
ಪ್ರಶ್ನೆ – ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ನೀವು ಮತ್ತೆ ಆಡುತ್ತಿದ್ದೀರಿ.. ಹೇಗೆ ಅನ್ನಿಸುತ್ತಿದೆ..?
ಪೃಥ್ವಿ ಶಾ – ರಾಹುಲ್ ದ್ರಾವಿಡ್ ಸರ್ ಜೊತೆಗಿರುವುದು ಒಂದು ಭಿನ್ನ ಅನುಭವ..ಅದರ ಮಜಾನೆ ಬೇರೆ ಇದೆ. ಅವರು ನಮ್ಮ 19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಅವರು ಮಾತನಾಡುವ ಶೈಲಿ, ತನ್ನ ಅನುಭವಗಳನ್ನು ಹಂಚಿಕೊಳ್ಳುವ ರೀತಿ ತುಂಬಾನೇ ಮಧುರವಾಗಿರುತ್ತದೆ. ಕ್ರಿಕೆಟ್ ಬಗ್ಗೆ ಮಾತನಾಡುವಾಗ ಅವರು ತಮ್ಮ ಅನುಭವಗಳನ್ನು ಧಾರೆ ಎರೆಯುತ್ತಾರೆ. ಅವರು ಎಷ್ಟೊಂದು ಅನುಭವಿ ಎಂಬುದನ್ನು ತಿಳಿಸಿಕೊಡುತ್ತದೆ. ಕ್ರಿಕೆಟ್ ಬಗ್ಗೆ ಅವರಿಗೆ ಎಲ್ಲಾ ಗೊತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಮಾತನಾಡುತ್ತಾ, ಅದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತಾರೆ.
ಪ್ರಶ್ನೆ -ಇತ್ತೀಚೆಗೆ ರಾಹುಲ್ ದ್ರಾವಿಡ್ ಜೊತೆ ನೀವು ಮಾತನಾಡಿದ್ದೀರಾ ?
ಪೃಥ್ವಿ ಶಾ- ಹೌದು, ನಾನು ಮಾತನಾಡಿದ್ದೇನೆ. ಶ್ರೀಲಂಕಾ ಪ್ರವಾಸದ ಬಗ್ಗೆಯೂ ಮಾತನಾಡಿದ್ದೇನೆ. ಅದಕ್ಕಿಂತ ಮುನ್ನ ನಾನು ಡೋಪಿಂಗ್ ನಲ್ಲಿ ನಿಷೇಧಕ್ಕೆ ಗುರಿಯಾಗಿದ್ದಾಗ ಅವರು ಕರೆ ಮಾಡಿ ಮಾತನಾಡಿದ್ದರು. ಇವೆಲ್ಲಾ ಕ್ರೀಡಾ ಬದುಕಿನ ಭಾಗ. ಇದು ನಿನ್ನ ತಪ್ಪಲ್ಲ. ಇದ್ರಿಂದ ನೀನು ಇನ್ನಷ್ಟು ಗಟ್ಟಿಯಾಗಿ ಹೊರಗೆ ಬರ್ತಿಯಾ ಎಂದು ಆತ್ಮವಿಶ್ವಾಸ ತುಂಬಿದ್ದರು. ಇದು ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬಲು ಸಾಧ್ಯವಾಯ್ತು. ನನ್ನ ಕೆಟ್ಟ ದಿನಗಳಲ್ಲಿ ಅವರು ನನಗೆ ಮಾರ್ಗದರ್ಶನ ನೀಡಿದ್ದರು.
ಪ್ರಶ್ನೆ – ರಾಹುಲ್ ದ್ರಾವಿಡ್ ಅವರಿಂದ ಏನನ್ನು ನಿರೀಕ್ಷೆ ಮಾಡುತ್ತಿರಾ ?
ಪೃಥ್ವಿ ಶಾ – ರಾಹುಲ್ ದ್ರಾವಿಡ್ ಸರ್ ಇದ್ರೆ ಡ್ರೆಸಿಂಗ್ ರೂಮ್ ನಲ್ಲಿ ಶಿಸ್ತು ಇರುತ್ತೆ. ನಾನು ರಾಹುಲ್ ಸರ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುವುದನ್ನು ಎದುರು ನೋಡುತ್ತಿದ್ದೇನೆ. ನನಗೆ ಅವರ ಜೊತೆ ಮಾತನಾಡುವುದು ಅಂದ್ರೆ ತುಂಬಾನೇ ಇಷ್ಟ. ಗಂಟೆಗಟ್ಟಲೇ ಅವರ ಜೊತೆ ಮಾತನಾಡುವುದನ್ನು ಇಷ್ಟಪಡುತ್ತೇನೆ. ಈ ಪ್ರವಾಸದಲ್ಲಿ ಅವಕಾಶಗಳನ್ನು ಬಾಚಿಕೊಳ್ಳಬೇಕು. ನಾನು ತುಂಬಾನೇ ಹತಾಶನಾಗಿದ್ದೇನೆ. ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ನನಗೆ ತಂಡ ಮುಖ್ಯ.. ಅದು ಟೀಮ್ ಇಂಡಿಯಾ ಆಗಿರಲಿ, ರಣಜಿ ಟ್ರೋಫಿ ಆಗಿರಲಿ, ಕ್ಲಬ್ ಟೀಮ್ ಆಗಿರಲಿ, ಸ್ಕೂಲ್ ಟೀಮ್ ಕೂಡ ಆಗಿರಲಿ..ಶ್ರೇಷ್ಠ ಪ್ರದರ್ಶನ ನೀಡುವುದನ್ನು ನಾನು ಬಯಸುತ್ತೇನೆ.
ಪ್ರಶ್ನೆ – ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿರುವ ಬಗ್ಗೆ ಏನು ಹೇಳ್ತಿರಾ ?
ಪೃಥ್ವಿ ಶಾ – ಖುಷಿಯಾಗಿದೆ. ನಾನು ರನ್ ಗಳಿಸುತ್ತಿದೆ. ಹೀಗಾಗಿ ಮತ್ತೆ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಅನ್ನೋ ಭಾವನೆ ಮೂಡಿತ್ತು. ಯಾಕಂದ್ರೆ ನಾನು ಬ್ಯಾಟಿಂಗ್ ಮಾಡುತ್ತಿದ್ದ ರೀತಿಗೆ ರನ್ ಗಳು ಕೂಡ ಹಿಂದೆ ಬರುತ್ತಿದ್ದವು..
ಪ್ರಶ್ನೆ – ನೀವು ಸಲಹೆಗಳನ್ನು ತೆಗೆದುಕೊಳ್ಳುತ್ತೀರಾ ? ಅಥವಾ ಎಲ್ಲರ ಮಾತುಗಳನ್ನು ಕೇಳುತ್ತೀರಾ ? ಕೊನೆಯಲ್ಲಿ ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ ?
ಪೃಥ್ವಿ ಶಾ – ನಾನು ಪದೇ ಪದೇ ತಪ್ಪುಗಳನ್ನು ಮಾಡಿದಾಗ ನಾನು ಸಲಹೆಗಳನ್ನು ಕೇಳುತ್ತೇನೆ. ಮಾರ್ಗದರ್ಶನಗಳನ್ನು ಪಡೆಯುತ್ತೇನೆ. ಜೊತೆಗೆ ಅವುಗಳನ್ನು ಸರಿಪಡಿಸುವ ಪ್ರಯತ್ನಗಳನ್ನು ಮಾಡುತ್ತೇನೆ.
ಪ್ರಶ್ನೆ- ಕೆಟ್ಟ ಫಾರ್ಮ್ ನಲ್ಲಿದ್ದಾಗ ಅಭ್ಯಾಸ ನಡೆಸುವುದಿಲ್ಲ ಎಂದು ರಿಕಿ ಪಾಂಟಿಂಗ್ ಹೇಳಿದ್ದರು.. ಇದು ಈಗಲೂ ಇದೆಯಾ ?
ಪೃಥ್ವಿ ಶಾ – ಈಗಲೂ ಇದೆ. ಕಠಿಣ ಅಭ್ಯಾಸ ನಡೆಸಿದಾಗ ಅದು ಕಾರ್ಯರೂಪಕ್ಕೆ ಬರಲಿಲ್ಲ ಅಂದಾಗ ನನಗೆ ವೈಯಕ್ತಿಕವಾಗಿ ಆ ರೀತಿಯ ಭಾವನೆಗಳು ಬರುತ್ತವೆ. ಹಾಗಂತ ನಾನು ಕಷ್ಟಪಡುತ್ತೇನೆ ಎಂದು ಬೇರೆಯವರಿಗೆ ತೋರಿಸುವ ಜಾಯಮಾನ ನನ್ನದಲ್ಲ, ನನ್ನೊಳಗಿನ ಧ್ವನಿ ನನಗೆ ಸಹಮತ ನೀಡುತ್ತಿಲ್ಲ. ಆಗ ನನ್ನೊಳಗೆ ನಾನು ಒತ್ತಾಯ ಮಾಡಿಕೊಳ್ಳುವುದಿಲ್ಲ. ಸ್ವಲ್ಪ ವಿರಾಮ ತೆಗೆದುಕೊಂಡು ಮತ್ತೆ ಉತ್ಸುಕನಾಗಿ ಆರಂಭಿಸುತ್ತೇನೆ.
ಪ್ರಶ್ನೆ – 2021ರ ಐಪಿಎಲ್ ಸ್ಥಗಿತಗೊಂಡ ನಂತರ ಏನು ಮಾಡಿದ್ದೀರಿ ?
ಪೃಥ್ವಿ ಶಾ – ಐಪಿಎಲ್ ಸ್ಥಗಿತಗೊಂಡ ನಂತರ ನಾನು ಆಲಿಬಾಗ್ ನಲ್ಲಿರುವ ತೋಟದ ಮನೆಯಲ್ಲಿ ಕಾಲ ಕಳೆದೆ. ಕೆಲವು ವಾರಗಳ ಹಿಂದೆಯಷ್ಟೇ ವಾಪಸ್ ಬಂದೆ. ನಂತರ ನಾನು ಟ್ರೈನರ್ ರಜಿನಿ ಜೊತೆ ಅಭ್ಯಾಸದಲ್ಲಿ ನಿರತನಾದೆ. ರಜನಿ ಅವರು ಶ್ರೇಯಸ್ ಅಯ್ಯರ್ ಅವರಿಗೆ ನೆರವು ನೀಡಿದ್ದರು. ಮುಂಬೈನಲ್ಲಿ ಲಾಕ್ ಆಗಿರುವುದರಿಂದ ಹೆಚ್ಚಿನ ಸಮಯ ತರಬೇತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಪ್ರಶ್ನೆ – ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ ನಂತರ ನಿಮ್ಮ ಬ್ಯಾಟಿಂಗ್ ನಲ್ಲಿ ಏನಾದ್ರೂ ಬದಲಾವಣೆಯಾಗಿದೆಯಾ ?
ಪೃಥ್ವಿ ಶಾ – ಪ್ರತಿಯೊಬ್ಬರಿಗೂ ಗೊತ್ತು.. ನಾನು ಕಠಿಣ ಶ್ರಮಪಟ್ಟಿದ್ದೇನೆ. ಹೌದು, ನನ್ನ ಬ್ಯಾಟಿಂಗ್ ಟೆಕ್ನಿಕ್ ಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇನೆ. ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆ ನನ್ನ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಹಾಗೇ ನನ್ನ ಫಿಟ್ ನೆಸ್ ಬಗ್ಗೆ ಮಾತುಗಳು ಕೇಳಿಬಂದಿದ್ದವು. ನಾನು ಎಷ್ಟು ಶ್ರಮಪಟ್ಟಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ನಾನು ಟೀಮ್ ಇಂಡಿಯಾಗೆ ಮತ್ತೆ ಕಮ್ ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಬೇರೆಯವರು ಏನು ಹೇಳ್ತಾರೆ ಅನ್ನೋದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರತಿ ದಿನವೂ ನಾವು ಸುಧಾರಣೆ ಮಾಡಿಕೊಳ್ಳಬೇಕು ಎಂಬ ಭಾವನೆ ನನ್ನದು.
ಪ್ರಶ್ನೆ- ನೀವು ರಿಕಿ ಪಾಂಟಿಂಗ್ ಜೊತೆ ಮಾತನಾಡಿದ್ದೀರಾ ? ಅವರೊಂದಿಗೆ ಏನು ಮಾತನಾಡಿದ್ದೀರಿ.. ?
ಪೃಥ್ವಿ ಶಾ – ಹೌದು, ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೆ. ರಿಕಿ ಪಾಂಟಿಂಗ್ ಸರ್ ಜೊತೆ ಸಂವಾದ ನಡೆಸಿದ್ದೇನೆ. ಅದೊಂದು ಸಹಜ ಮಾತುಕತೆಯಾಗಿತ್ತು. ಆದ್ರೆ ಬ್ಯಾಟಿಂಗ್ ಬಗ್ಗೆ ಮಾತನಾಡಲಿಲ್ಲ. ಬದಲಾಗಿ ತಂಡಕ್ಕೆ ಉತ್ತಮ ಆರಂಭ ಪಡೆಯುವ ತಂತ್ರಗಳ ಬಗ್ಗೆ ಅವರು ಸಲಹೆಗಳನ್ನು ನೀಡಿದ್ದಾರೆ.
ಪ್ರಶ್ನೆ – ಐಪಿಎಲ್ ಗೆ ಮುನ್ನ ವಿಜಯ್ ಹಜಾರೆ ಟೂರ್ನಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ರೀತಿಯ ಬಗ್ಗೆ,,?
ಪೃಥ್ವಿ ಶಾ – ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ರನ್ ಹಸಿವು ನೀಗಿಸುವತ್ತ ಚಿತ್ತವನ್ನಿಟ್ಟಿದ್ದೆ. ಅಲ್ಲದೆ ಪಂದ್ಯವನ್ನು ಬೇಗ ಮುಗಿಸಬೇಕು ಅನ್ನೋ ದಾಟಿಯಲ್ಲಿ ಆಡಿದ್ದೆ. ಶಿಸ್ತುಬದ್ಧವಾಗಿ ಆಡುವತ್ತ ಗಮನಹರಿಸಿದ್ದೆ. ಬೇರೆ ವಿಷಯಗಳ ಬಗ್ಗೆ ಯೋಚನೆ ಮಾಡಿಕೊಂಡು ಸಮಯ ವ್ಯರ್ಥ ಮಾಡಲಿಲ್ಲ.
ಪ್ರಶ್ನೆ – ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರ ನಾಯಕತ್ವದ ಬಗ್ಗೆ ..?
ಪೃಥ್ವಿ ಶಾ – ರಿಷಬ್ ಪಂತ್ ಮೈದಾನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಇನ್ನುಳಿದ ವಿಷಯಗಳನ್ನು ರಿಕಿ ಪಾಂಟಿಂಗ್ ಸಾರ್ ನೋಡಿಕೊಳ್ಳುತ್ತಿದ್ದರು. ರಿಷಬ್ ಪಂತ್ ತಂಡದ ಮೇಲೆ ಸಾಕಷ್ಟು ವಿಶ್ವಾಸವನ್ನಿಟ್ಟುಕೊಂಡಿದ್ದರು. ಎಲ್ಲಾ ಆಟಗಾರರ ಮೇಲೂ ನಂಬಿಕೆಯನ್ನಿಟ್ಟುಕೊಂಡಿದ್ದರು.