ಬೆಂಗಳೂರು: ಅಕ್ರಮ ಸಂಧದ ವಿಚಾರದಲ್ಲಿ ಮಹಿಳೆಯನ್ನು 16 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. 40 ವರ್ಷದ ಮಹಿಳೆ ಕೊಲೆಯಾಗಿದ್ದು, ಆಕೆಯ ಪತಿ 55 ವರ್ಷದ ಧನು ಮತ್ತು ಪ್ರಿಯಕರ 36 ವರ್ಷದ ವಡಿವೇಲು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಘಟನೆ..?
ಮಂಗಳವಾರ ರಾತ್ರಿ ಮೃತ ಮಹಿಳೆಯ ಪತಿ ಧನು ಮನೆಯಲ್ಲಿದ್ದಾಗ ಪ್ರಿಯಕರ ವಡಿವೇಲು ಆಗಮಿಸಿದ್ದಾನೆ. ಈ ವೇಳೆ ಧನು ತನ್ನ ಪತ್ನಿಯನ್ನು ವಡಿವೇಲು ವಿಚಾರವಾಗಿ ಪ್ರಶ್ನಿಸಿದ್ದಾನೆ.. ಇದಲ್ಲದೆ ಮನೆಯಲ್ಲೇ ಧನು- ವಡಿವೇಲು ಇಬ್ಬರು ಜಗಳವಾಗಿದ್ದಾರೆ. ಈ ಗಲಾಟೆಯಲ್ಲಿ ಮಹಿಳೆಯನ್ನು ಕೊಲೆ ಮಾಡಲಾಗಿದ್ದು 16 ಬಾರಿ ಇರಿದ ಗುರುತುಗಳು ಪತ್ತೆಯಾಗಿವೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆದರೆ ಹತ್ಯೆ ಮಾಡಿದವರು ಯಾರು ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿಲ್ಲ ಎಂದು ತಿಳಿದುಬಂದಿದೆ.








