ವಿಶ್ವ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಬ್ಯೂಟಿಫುಲ್ ಜರ್ನಿ… ಗೂಟ ರಕ್ಷಕನೂ ಹೌದು.. ಚೌಕಿದಾರನೂ ಹೌದು.. !
ಮಹೇಂದ್ರ ಸಿಂಗ್ ಧೋನಿ…
ವಿಶ್ವ ಕ್ರಿಕೆಟ್ ನ ಗ್ರೇಟ್ ಲೀಡರ್.. ಟೀಮ್ ಇಂಡಿಯಾದ ಶ್ರೇಷ್ಠ ನಾಯಕ, ಒಡನಾಡಿಗಳಿಗೆ ಕೂಲ್ ಕ್ಯಾಪ್ಟನ್.. ಅಭಿಮಾನಿಗಳಿಗೆ ಪಕ್ಕಾ ಎಂಟೈಟೇನರ್.. ಜಾಹೀರಾತು ಕಂಪೆನಿಗಳಿಗೆ ಸೂಪರ್ ಸ್ಟಾರ್.. ಎದುರಾಳಿ ತಂಡಗಳಿಗೆ ಗ್ಯಾಂಬ್ಲರ್.. ಅಷ್ಟೇ ಅಲ್ಲ ಕ್ಲಾಸ್ ಗೂ ಸೈ, ಮಾಸ್ ಗೂ ಜೈ ಅನ್ನುವ ರಾಂಚಿ ರಾಂಬೋ ವಿಶ್ವ ಕ್ರಿಕೆಟ್ ನ ಎವರ್ ಗ್ರೀನ್ ಹೀರೋ.
2007ರ ಟಿ-ಟ್ವೆಂಟಿ ವಿಶ್ವಕಪ್, 2011ರ ಏಕದಿನ ವಿಶ್ವಕಪ್, ಐಸಿಸಿ ನಂಬರ್ ವನ್ ಟೆಸ್ಟ್ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಚಾಣಕ್ಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ವಿಶ್ವಕಪ್, ನಂಬರವನ್ ಟೆಸ್ಟ್ ತಂಡ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವ ಕ್ರಿಕೆಟ್ ನ ಮೊದಲ ನಾಯಕ ಎಂಬ ಗೌರವ ಕೂಡ ಧೋನಿಗೆ ಸಲ್ಲುತ್ತದೆ.
60 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದ ಧೋನಿ, 27 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. 18 ಪಂದ್ಯಗಳಲ್ಲಿ ಸೋತ್ರೆ, 11 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
200 ಏಕದಿನ ಪಂದ್ಯಗಳಲ್ಲಿ ನಾಯಕನಾಗಿದ್ದ ಧೋನಿ, 110 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 74ರಲ್ಲಿ ಸೋಲು ಹಾಗೂ 11 ಪಂದ್ಯಗಳಲ್ಲಿ ಫಲಿತಾಂಶಗಳು ಬಂದಿಲ್ಲ.
ಹಾಗೇ 72 ಟಿ-ಟ್ವೆಂಟಿ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 42 ಪಂದ್ಯಗಳಲ್ಲಿ ಜಯ ಹಾಗೂ 28 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಎರಡು ಪಂದ್ಯಗಳ ಫಲಿತಾಂಶ ಬಂದಿಲ್ಲ.
ಒಟ್ಟು 332 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದು, 179 ಗೆಲುವು, 120 ಸೋಲು, ಐದು ಟೈ ಹಾಗೂ 28 ಪಂದ್ಯಗಳು (ಡ್ರಾ ಸೇರಿ) ಫಲಿತಾಂಶಗಳು ಬಂದಿಲ್ಲ.
ಇನ್ನು ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಧೋನಿ ಮುಂಚೂಣಿಯಲ್ಲಿದ್ದಾರೆ. ಏಕದಿನ ವಿಶ್ವಕಪ್ ನಲ್ಲಿ ನಾಯಕನಾಗಿ 17 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಇದ್ರಲ್ಲಿ 14 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 2 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಒಂದು ಪಂದ್ಯ ಟೈ ಆಗಿದೆ.
33 ಐಸಿಸಿ ಟಿ-ಟ್ವೆಂಟಿ ಪಂದ್ಯಗಳಲ್ಲಿ 21 ಗೆಲುವು, 11 ಸೋಲು ಹಾಗೂ ಒಂದು ಪಂದ್ಯದ ಫಲಿತಾಂಶ ಬಂದಿಲ್ಲ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿರುವ ನಾಯಕ ಧೋನಿ, ಒಂದು ಪಂದ್ಯ ಸೋತಿದ್ದಾರೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ
ಒಟ್ಟು 58 ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾದ ಸಾರಥ್ಯ ವಹಿಸಿರುವ ಧೋನಿ, 41 ಗೆಲುವು, 14 ಸೋಲು, ಒಂದು ಟೈ ಹಾಗೂ 2 ಪಂದ್ಯಗಳ ಫಲಿತಾಂಶ ಬಂದಿಲ್ಲ.
ಹಾಗೇ ಧೋನಿ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 90 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 4876 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಐದು ಶತಕಗಳಿವೆ.
350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ, 10773 ರನ್ ಪೇರಿಸಿದ್ದಾರೆ. 10 ಶತಕಗಳನ್ನು ದಾಖಲಿಸಿದ್ದಾರೆ. ಒಟ್ಟು 21 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
98 ಟಿ-ಟ್ವೆಂಟಿ ಪಂದ್ಯಗಳಲ್ಲಿ 1617 ರನ್ ಗಳಿಸಿದ್ದಾರೆ. ಆದ್ರೆ ಟಿ-ಟ್ವೆಂಟಿ ಪಂದ್ಯಗಳಲ್ಲಿ ಒಂದೇ ಒಂದು ಬಾರಿ ಕೂಡ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿಲ್ಲ.
ಒಟ್ಟಾರೆ ಮಹೇಂದ್ರ ಸಿಂಗ್ ಧೋನಿ, 536 ಪಂದ್ಯಗಳನ್ನು ಆಡಿದ್ದು, 17256 ರನ್ ಗಳಿಸಿದ್ದಾರೆ. 16 ಶತಕಗಳನ್ನು ದಾಖಲಿಸಿದ್ದಾರೆ.
ಇನ್ನೊಂದೆಡೆ ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ನಲ್ಲಿ ಅಪರೂಪದ ಹಲವು ದಾಖಲೆಗಳ ಒಡೆಯನಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರನೇ ಕ್ರಮಾಂಕದಲ್ಲಿ (ಏಳು-ಎಂಟನೇ ಕ್ರಮಾಂಕ) ಅತೀ ಹೆಚ್ಚು ರನ್ ದಾಖಲಿಸಿದ್ದ ಆಟಗಾರ. ಧೋನಿ ಒಟ್ಟು 10,628 ರನ್ ಗಳಿಸಿದ್ದಾರೆ.
ಇನ್ನು ಟೆಸ್ಟ್, ಏಕದಿನ, ಟಿ-ಟ್ವೆಂಟಿ ಪಂದ್ಯಗಳಲ್ಲಿ 142 ಬಾರಿ ಅಜೇಯರಾಗುಳಿದಿರುವ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಧೋನಿ ಟೀಮ್ ಇಂಡಿಯಾದ ಗ್ರೇಟ್ ಮ್ಯಾಚ್ ಫಿನಿಶರ್ ಕೂಡ ಹೌದು.
ಮೂರು ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಕೀರ್ತಿ ಕೂಡ ಧೋನಿಯವರದ್ದು. 332 ಪಂದ್ಯಗಳಿಗೆ ಧೋನಿ ಸಾರಥಿಯಾಗಿದ್ದರು. ರಿಕಿ ಪಾಂಟಿಂಗ್ (324) ಎರಡನೇ ಸ್ಥಾನದಲ್ಲಿದ್ದಾರೆ.
ಅಷ್ಟೇ ಅಲ್ಲ ಗೂಟರಕ್ಷಕನಾಗಿ ಟೆಸ್ಟ್ ನಲ್ಲಿ 294, ಏಕದಿನ ಕ್ರಿಕೆಟ್ ನಲ್ಲಿ 444 ಹಾಗೂ ಟಿ-ಟ್ವೆಂಟಿಯಲ್ಲಿ 91 ಬಲಿಪಡೆದುಕೊಂಡ ಟೀಮ್ ಇಂಡಿಯಾದ ಮೊದಲ ವಿಕೆಟ್ ಕೀಪರ್ ನಮ್ಮ ಮಾಹಿ.
ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ನ ಅತ್ಯಬ್ಧುತ ನಾಯಕ. ಸೋಲು -ಗೆಲುವನ್ನು ಸಮವಾಗಿ ಸ್ವೀಕರಿಸುವ ಧೋನಿಯ ನಾಯಕತ್ವ ಯುವ ಆಟಗಾರರಿಗೆ ಸ್ಪೂರ್ತಿ ಮತ್ತು ಮಾದರಿ. ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಗೂಟರಕ್ಷಕನೂ ಹೌದು… ಚೌಕಿದಾರನೂ ಹೌದು..