ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ ಹಸಿವಿನಿಂದ ಸಾವನಪ್ಪುತ್ತಿರುವವರ ಸಂಖ್ಯೆ ಎಷ್ಟು..? ಕೋವಿಡ್ ಗಿಂತಲೂ ಹೆಚ್ಚಿನ ಜನ ಹಸಿವಿನಿಂದ ಸಾವು..!
ಒಮದೆಡೆ ವಿಶ್ವಾದ್ಯಂತ ಕೋವಿಡ್ ಹಾವಳಿ ಇಂದ ಜನ ಸಂಕಷ್ಟಕ್ಕೆ ಸಿಲುಕಿದ್ದು, ಕೋಟ್ಯಾಂತರ ಜನರು ಇಲ್ಲಿಯವರೆಗೂ ಜೀವ ಕಳೆದುಕೊಂಡಿದ್ದಾರೆ.. ಆದ್ರೆ ಕೋವಿಡ್ ಗಿಂತಲೂ ಹೆಚ್ಚು ಜನರು ಹಸಿವಿನಿಂದ ಮೃತಪಡುತ್ತಿರುವ ಆಗಾತಕಾರಿ ಸಂಗತಿ ಬಹಿರಂಗವಾಗಿದೆ.. ‘ಆಕ್ಸ್‌ಫ್ಯಾಮ್’ ವರದಿ ಪ್ರಕಾರ ಜಗತ್ತಿನಿದಾದ್ಯಂತ ಪ್ರತಿ ನಿಮಿಷಕ್ಕೆ 11 ಮಂದಿ ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ‘ದ್ವಿಗುಣಗೊಳ್ಳುವ ಹಸಿವಿನ ವೈರಸ್’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಆಕ್ಸ್‌ಫ್ಯಾಮ್ ವರದಿಯನ್ನು ಸಿದ್ಧಪಡಿಸಿದೆ.
ಇದರ ಅನ್ವಯ ಕೋವಿಡ್‌ಗಿಂತಲೂ ಹಸಿವಿನಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್–19ನಿಂದ ಪ್ರತಿ ನಿಮಿಷಕ್ಕೆ ಏಳು ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಗತ್ತಿನಾದ್ಯಂತ ಆಹಾರದ ಕೊರತೆಯನ್ನು ಎದುರಿಸುತ್ತಿರುವ 15.5 ಕೋಟಿ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷಕ್ಕಿಂತ ಈ ಪ್ರಮಾಣವು 2 ಕೋಟಿಗೂ ಹೆಚ್ಚು ಎಂದು ವರದಿ ತಿಳಿಸಿದೆ.
ಕಳೆದ ವರ್ಷದಿಂದ ಕ್ಷಾಮ ರೀತಿಯ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶಗಳ ಸಂಖ್ಯೆಯು ಸಹ ಆರು ಪಟ್ಟು ಹೆಚ್ಚಿದೆ ಎಂದು ತಿಳಿಸಿದೆ. ಕೋವಿಡ್‌ನಿಂದ ಎದುರಾದ ಆರ್ಥಿಕ ಸಂಕಷ್ಟ ಮತ್ತು ಹವಾಮಾನ ಬಿಕ್ಕಟ್ಟಿನಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಆಹಾರ ಬೆಲೆಗಳು ಶೇಕಡ 40ರಷ್ಟು ಹೆಚ್ಚಾಗಿವೆ. ಹೀಗಾಗಿ, ಬಡಜನರು ಹಸಿವಿನಿಂದ ಬಳಲು ಇದು ಸಹ ಪ್ರಮುಖ ಕಾರಣವಾಗಿದೆ ಎಂದು ಆಕ್ಸ್‌ಫ್ಯಾಮ್ ಅಮೆರಿಕ ಅಧ್ಯಕ್ಷ ಮತ್ತು ಸಿಇಒ ಅಬ್ಬಿ ಮ್ಯಾಕ್ಸ್‌ಮ್ಯಾನ್ ತಿಳಿಸಿದ್ದಾರೆ.
ಸಾಂಕ್ರಾಮಿಕ ಕಾಯಿಲೆಯ ಮಧ್ಯೆಯೂ ಜಾಗತಿಕವಾಗಿ ಮಿಲಿಟರಿ ಸಾಮರ್ಥ್ಯ ವೃದ್ಧಿಸಲು ಮಾಡುತ್ತಿದ್ದ ವೆಚ್ಚವು 5100 ಕೋಟಿ ಡಾಲರ್ ನಷ್ಟು ಏರಿಕೆಯಾಗಿದೆ. ವಿಶ್ವಸಂಸ್ಥೆಯು ಹಸಿವು ನೀಗಿಸಲು ಕೈಗೊಂಡ ಕ್ರಮಗಳಿಗೆ ವೆಚ್ಚ ಮಾಡುತ್ತಿದ್ದ ಮೊತ್ತಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಸಂಘರ್ಷ ಎದುರಿಸುತ್ತಿರುವ ರಾಷ್ಟ್ರಗಳಾದ ಅಫ್ಗಾನಿಸ್ತಾನ, ಇಥಿಯೊಪಿಯಾ, ದಕ್ಷಿಣ ಸುಡಾನ್, ಸಿರಿಯಾ, ಯೆಮೆನ್‌ನಲ್ಲಿ ಹಸಿವಿನಿಂದ ಬಳಲುತ್ತಿರುವ ಸಂಖ್ಯೆ ಅಪಾರವಾಗಿದೆ. ಹಸಿವು ಎನ್ನುವುದು ಸಹ ಯುದ್ಧದ ಅಸ್ತ್ರವಾಗಿದೆ. ನಾಗರಿಕರಿಗೆ ಆಹಾರ ಮತ್ತು ನೀರು ಹಾಗೂ ಪರಿಹಾರ ಒದಗಿಸದೆ ವಂಚಿಸಲಾಗುತ್ತಿದೆ.
ಮಾರುಕಟ್ಟೆ ಪ್ರದೇಶಗಳ ಮೇಲೆ ಬಾಂಬ್ ಹಾಕುವುದು ಮತ್ತು ಬೆಳೆಗಳನ್ನು ನಾಶಪಡಿಸುವ ಪರಿಸ್ಥಿತಿ ಇರುವಾಗ ಜನರು ಸುರಕ್ಷಿತವಾಗಿ ಬದುಕುವುದು ಹೇಗೆ ಸಾಧ್ಯ ಎಂದು ಮ್ಯಾಕ್ಸ್‌ಮ್ಯಾನ್ ಪ್ರಶ್ನಿಸಿದ್ದಾರೆ. ಜೊತೆಗೆ ಸರ್ಕಾರಗಳು ಸಂಘರ್ಷವನ್ನು ನಿಲ್ಲಿಸುವ ಕ್ರಮಗಳನ್ನು ಕೈಗೊಂಡು , ಸಂಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ ಪರಿಹಾರ ಒದಗಿಸಬೇಕು ಎಂದು ಕೋರಿದ್ದಾರೆ.