ಕೋವಿಡ್ , ಫಂಗಸ್ , ಡೆಲ್ಟಾ, ಲ್ಯಾಂಬ್ಡಾ ಆಯ್ತು…. ಈಗ ಝಿಕಾ ಆತಂಕ..! ಕೇರಳದಲ್ಲಿ ಮೊದಲ ಕೇಸ್ ಪತ್ತೆ..!
ಇಡೀ ವಿಶ್ವ ಹಾಗೂ ದೇಶದಲ್ಲಿ ಕೋವಿಡ್ ಹಾವಳಿ ಜೊತೆಗೆ ಬ್ಲಾಕ್ ಫಂಗಸ್ , ಹಸಿಇರು ಫಂಗಸ್ ಯೆಲ್ಲೋ ಫಂಗಸ್ ಆತಂಕದ ನಡುವೆ ಡೆಲ್ಟಾ ಹಾವಳಿ ಮಿತಿ ಮೀರುತ್ತಿದೆ.. ಕೊರೊನಾ 3ನೇ ಅಲೆಯ ಎಚ್ಚರಿಕೆ ಇದೆ.. ಈ ನಡುವೆ ಇಡೀ ವಿಶ್ವಾದ್ಯಂತ ಡೆಲ್ಟಾಗಿಂತಲೂ ಹೆಚ್ಚು ಅಪಾಯಕಾರಿ ವೈರಸ್ ಲ್ಯಾಂಡ್ಬಾ ಆತಂಕ ಶುರುವಾಗಿದೆ ಆದ್ರೆ ಭಾರತದಲ್ಲಿ ಈ ವೈರಸ್ ಇನ್ನೂ ಪತ್ತೆಯಾಗಿಲ್ಲ.. ಆದ್ರೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದೆಲ್ಲದರ ಆತಂಕದ ನಡುವೆ ಇದೀಗ ಹೊಸ ಭೀತಿ ಎದುರಾಗಿದೆ.. ಹೌದು ಈಗ ಝಿಕಾ ವೈರಸ್‌ನ ಆತಂಕ ಶುರುವಾಗಿದೆ. ಕೇರಳದಲ್ಲಿ ಝಿಕಾ ವೈರಸ್ ನ ಮೊದಲ ಪ್ರಕರಣ ಪತ್ತೆಯಾಗಿದ್ದು, 24 ವರ್ಷದ ಗರ್ಭಿಣಿಗೆ ಸೊಳ್ಳೆಯಿಂದ ಹರಡುವ ಈ ಕಾಯಿಲೆ ಇರುವುದು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಅಂದ್ಹಾಗೆ ಝಿಕಾ ತಿರುವನಂತಪುರಂನಲ್ಲಿ ಇನ್ನೂ 13 ಶಂಕಿತ ಪ್ರಕರಣಗಳಿವೆ ಎಂದು ಸಚಿವರು ಪಿಟಿಐಗೆ ತಿಳಿಸಿದ್ದಾರೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ಯಿಂದ ದೃಢೀಕರಣಕ್ಕಾಗಿ ಸರ್ಕಾರವು ಕಾಯುತ್ತಿದೆ. ತಿರುವನಂತಪುರಂನಿಂದ ಕಳುಹಿಸಲಾದ 19 ಮಾದರಿಗಳಲ್ಲಿ, ವೈದ್ಯರು ಸೇರಿದಂತೆ 13 ಆರೋಗ್ಯ ಕಾರ್ಯಕರ್ತರಿಗೆ ಝಿಕಾ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ ಹಸಿವಿನಿಂದ ಸಾವನಪ್ಪುತ್ತಿರುವವರ ಸಂಖ್ಯೆ – ಕೋವಿಡ್ ಗಿಂತಲೂ ಹೆಚ್ಚಿನ ಜನ ಹಸಿವಿನಿಂದ ಸಾವು..!
ಝಿಕಾ ಸೋಂಕಿತ ಮಹಿಳೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜುಲೈ 7 ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಜ್ವರ, ತಲೆನೋವು ಮತ್ತು ದೇಹದ ಮೇಲೆ ಕೆಂಪು ಮಚ್ಚೆ ಮೂಡಿದ್ದರಿಂದ ಜೂನ್ 28 ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆಯಲ್ಲಿ ಆಕೆಗೆ ಝಿಕಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪ್ರಯೋಗಾಲಯ ಮಾದರಿಗಳನ್ನು ಪುಣೆಯ ಎನ್‌ಐವಿಗೆ ಕಳುಹಿಸಲಾಗಿದೆ.
ಸದ್ಯ, ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಹೊರ ರಾಜ್ಯಕ್ಕೆ ಪ್ರಯಾಣ ಮಾಡಿದ ಇತಿಹಾಸವಿಲ್ಲದಿದ್ದರೂ, ಆಕೆಯ ಮನೆ ತಮಿಳುನಾಡು ಗಡಿಯಲ್ಲಿದೆ. ಒಂದು ವಾರದ ಹಿಂದೆ, ಆಕೆಯ ತಾಯಿಗೂ ಸಹ ಇದೇ ರೀತಿಯ ರೋಗಲಕ್ಷಣ ಕಂಡುಬಂದಿತ್ತು ಎಂದು ಪ್ರಕಟಣೆ ತಿಳಿಸಿದೆ. ಝಿಕಾ ರೋಗಲಕ್ಷಣಗಳಾದ ಜ್ವರ, ಚರ್ಮದ ದದ್ದುಗಳು ಮತ್ತು ಕೀಲು ನೋವು ಡೆಂಗ್ಯೂ ರೋಗಲಕ್ಷಣಗಳನ್ನೇ ಹೋಲುತ್ತವೆ ಎನ್ನಲಾಗಿದೆ.