ಮಂಗಳೂರಿನ ಎರಡು ಮೂರು ಕಡೆಗಳಲ್ಲಿ ಕೊರೋನಾ ಸೋಂಕಿತ ಮಹಿಳೆಯ ಶವ ಸುಡಲು ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶವದಹನಕ್ಕೆ ಎಲ್ಲಿಯೂ ಜಾಗ ಸಿಗದೆ ಹೋದರೆ, ತನ್ನ ಜಾಗದಲ್ಲೇ ಮಾಡಬಹುದು ಎಂದು ಹೇಳಿ ಶಾಸಕ ರಾಜೇಶ್ ನಾಯ್ಕ್ ಮಾನವೀಯತೆ ಮೆರೆದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಂಟ್ವಾಳದ 75 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಈ ಮೂಲಕ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ.
ಮೃತ ಪಟ್ಟ ಮಹಿಳೆಯ ಶವ ಸಂಸ್ಕಾರಕ್ಕೆ ಬೋಳೂರು, ನಂದಿಗುಡ್ಡೆ, ಪಚ್ಚನಾಡಿ ಬಳಿಕ ಮೂಡುಶೆಡ್ಡೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು. ನಂತರ ಬಂಟ್ವಾಳದಲ್ಲಿ ಈ ಕಾರ್ಯಕ್ಕೆ ಮುಂದಾದಾಗ ಅಲ್ಲಿಯೂ ಸ್ಥಳೀಯರ ವಿರೋಧ ಉಂಟಾದಾಗ, ರಾತ್ರಿ ಸುಮಾರು 11 ಗಂಟೆಗೆ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಅವರನ್ನು ಸಂಪರ್ಕಿಸಿತು.
ಕೂಡಲೇ ಮಾನವೀಯತೆ ಮೆರೆದ ಶಾಸಕ ರಾಜೇಶ್ ನಾಯ್ಕ್ ತನ್ನ ಪತ್ನಿ ಪುತ್ರರಲ್ಲಿ ಮಾತುಕತೆ ನಡೆಸಿ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಶವಸಂಸ್ಕಾರಕ್ಕೆ ಎಲ್ಲಿಯೂ ಅವಕಾಶ ಸಿಗದಲ್ಲಿ ನನ್ನ ಜಮೀನಿನಲ್ಲೇ ಮೃತ ಮಹಿಳೆಯ ಅಂತ್ಯಸಂಸ್ಕಾರ ಮಾಡಿ ಎಂದು ತಿಳಿಸಿದರು.
ಶವಸಂಸ್ಕಾರಕ್ಕೆ ಎಲ್ಲಿಯೂ ಅವಕಾಶ ಸಿಗದಿದಲ್ಲಿ ತನ್ನ ಸ್ವಂತ ಜಮೀನಿನಲ್ಲಿ ನಾನು ಅವಕಾಶ ನೀಡುತ್ತೇನೆ. ಯಾಕೆಂದರೆ ಮೃತಮಹಿಳೆ ನನ್ನ ಕ್ಷೇತ್ರದವರು. ಶವಸಂಸ್ಕಾರಕ್ಕೂ ಅವಕಾಶ ಸಿಗದ ದಯನೀಯ ಸ್ಥಿತಿ ನನ್ನ ಕ್ಷೇತ್ರದ ಮಹಿಳೆಗೆ ಬರಬಾರದು. ಶವಸಂಸ್ಕಾರ ಮಾಡುವುದು ಪುಣ್ಯಕಾರ್ಯ, ತನ್ನ ಜಾಗದಲ್ಲೇ ಮಾಡಬಹುದು ಎಂದು ಹೇಳಿದರು.
ಕೊನೆಗೆ ಬಿ.ಸಿ ರೋಡಿನ ಕೈಕುಂಜೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.








