ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ರೇವತಿ ಅವರೊಟ್ಟಿಗೆ ಕೆಲವು ದಿನಗಳ ಹಿಂದಷ್ಟೆ ಮುಗಿದಿದೆ. ನಿಖಿಲ್ ಕುಮಾರಸ್ವಾಮಿ ವಿವಾಹವನ್ನು ಭಾರಿ ಅದ್ಧೂರಿಯಾಗಿ ನೆರವೇರಿಸಲು ಮಾಜಿ ಸಿಎಂ ಕುಮಾರಸ್ವಾಮಿ ಸಜ್ಜಾಗಿದ್ದರು. ಕೇತಿಗಾನಹಳ್ಳಿ ಬಳಿಯ ಫಾರಂ ನಲ್ಲಿ ದೊಡ್ಡ ಸೆಟ್ ಹಾಕಿ, ಭಾರಿ ಸಂಖ್ಯೆಯ ಜನರ ಉಪಸ್ಥಿತಿಯಲ್ಲಿ ಮಗನ ಮದುವೆ ಮಾಡುವ ಇಚ್ಛೆ ಅವರದ್ದಾಗಿತ್ತು. ಆದ್ರೆ ಇನ್ನೇನು ಯೋಜನೆ ಕಾರ್ಯಗತವಾಗಬೇಕು, ಮದುವೆ ತಯಾರಿಗಳು ಆರಂಭವಾಗುವ ಹೊತ್ತಿಗೆ ಸರಿಯಾಗಿ ಕೊರೊನಾ ಬಂದು ವಕ್ಕರಿಸಿಕೊಂಡು ಸರಳವಾಗಿ ಮದುವೆ ಸಮಾರಂಭ ನಡೆಯುವಂತಾಯಿತು. ಮದುವೆ ಮುಗಿದ ಬೆನ್ನಲ್ಲೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಒದಗಿ ಬಂದ ಸಾಲು-ಸಾಲು ದುರಾದೃಷ್ಟಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಚರ್ಚೆ ಪ್ರಾರಂಭವಾಗಿದೆ.
ಮದ್ವೆ ವಿಚಾರದಲ್ಲೂ ಟ್ರೋಲ್!
ಪದೇ ಪದೇ ಒಂದಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಿದ್ದ ನಿಖಿಲ್, ಇದೀಗ ಮದ್ವೆ ವಿಚಾರದಲ್ಲೂ ಟ್ರೋಲ್ ಆಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮೊದಲಿಗೆ ಸಿನಿಮಾ ಮಾಡಿದರು, ಅದು ಸೂಕ್ತ ಗೆಲುವು ಕಾಣಲಿಲ್ಲ. ಆ ನಂತರ ರಾಜಕೀಯಕ್ಕೆ ಹೋದರು, ಭಾರಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದ ಅವರು ಸೋಲಬೇಕಾಯಿತು. ನಂತರ ಮದುವೆ ಆದರು, ಮದುವೆಗೆ ಜನರೇ ಬರದಂತಾಯಿತು ಎಂಬುದು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಚರ್ಚೆಯಾಗುತ್ತಿದೆ. ಕೆಲವು ಟ್ರೋಲಿಗರು, ನಿಖಿಲ್ ಕುಮಾರಸ್ವಾಮಿ ಅವರ ಚಿತ್ರವನ್ನು ಹಾಕಿ, ‘ಸಿನಿಮಾ ಮಾಡಿದರೆ ಜನ ಬರಲಿಲ್ಲ, ಚುನಾವಣೆಗೆ ನಿಂತರೆ ಮತ ಬರಲಿಲ್ಲ, ಮದುವೆಗೂ ಜನ ಬರಲಿಲ್ಲ, ಎಂಥಹಾ ದುರಾದೃಷ್ಟ’ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ.
ತಲೆಕೆಡಿಸಿಕೊಳ್ಳದ ನಿಖಿಲ್ ಕುಮಾರಸ್ವಾಮಿ!
ಹಿಂದೊಮ್ಮೆ ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂಬುದು ಬಹಳವಾಗಿ ಖ್ಯಾತವಾಗಿತ್ತು. ಆದರೆ ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ನಿಖಿಲ್ ಕುಮಾರಸ್ವಾಮಿ, ಟ್ರೋಲ್ಗಳನ್ನು ಕ್ರೀಡಾಸ್ಪೂರ್ತಿಯಿಂದಲೇ ಪರಿಗಣಿಸಿದ್ದರು. ಎಲ್ಲಿಯೂ ಟ್ರೋಲ್ಗಳ ವಿರುದ್ಧ ನಕಾರಾತ್ಮಕವಾಗಿ ಮಾತನಾಡಲಿಲ್ಲ.








