ಮ್ಯಾನ್ಮಾರ್ : ಆಂಗ್ ಸೂ ಕಿ ವಿರುದ್ಧ ಮತ್ತೆ 4 ಹೆಚ್ಚುವರಿ ಪ್ರಕರಣ ದಾಖಲು
ಮ್ಯಾನ್ಮಾರ್ : ಮ್ಯಾನ್ಮಾರ್ ನಲ್ಲಿ ಮಿಲಿಟರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಜನ ಬೀದಿಗಳಿದು ಮಿಲಿಟರಿ ಸರ್ಕಾರದ ವಿರುದ್ಧ ಹೋರಾಟ ನಡೆಸ್ತಾಯಿದ್ದಾರೆ.. ಸೇನೆ ಮತ್ತೆ ಜನರ ನಡುವಿನ ಸಂಘರ್ಷದಲ್ಲಿ ಇಲ್ಲಿನವರೆಗೂ ಲೆಕ್ಕಕ್ಕೆ ಸಿಗದಷ್ಟು ಮಂದಿ ಮೃತಪಟ್ಟಿದ್ದು, ಅನೇಕರು ದೇಶ ಬಿಟ್ಟು ನೆರ ರಾಷ್ಟ್ರಗಳಾದ ಥೈಲ್ಯಾಂಡ್ ಹಾಗೂ ಭಾರತಕ್ಕೆ ಪರಾರಿಯಾಗಿದ್ದಾರೆ.. ಜನರು ಪ್ರಜಾಪ್ರಭುತ್ವ ಮರುಸ್ಥಾಪನೆಗಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ..
ಇದೀಗ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿ ವಿರುದ್ಧ ಹೆಚ್ಚುವರಿಯಾಗಿ 4 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಂಗ್ ಸಾನ್ ಸೂ ಕಿ ಅವರ ಪರ ವಕೀಲರು, ಆಂಗ್ ಸಾನ್ ಸೂ ಕಿ ವಿರುದ್ಧ ಹೆಚ್ಚುವರಿಯಾಗಿ 4 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ.
ಆಂಗ್ ಸಾನ್ ಸೂ ಕಿ ಮಾತ್ರವಲ್ಲದೇ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಮಿನ್ ಥು ವಿರುದ್ಧವೂ 2 ಪ್ರಕರಣ ದಾಖಲಾಗಿರುವ ಮಾಹಿತಿ ಲಭಿಸಿದೆ. ಭ್ರಷ್ಟಾಚಾರದ ಆರೋಪ ಇಲ್ಲದಿದ್ದರೂ ಪ್ರಕರಣ ದಾಖಲಾಗಿರುವುದು ಅಚ್ಚರಿಯಾಗಿದೆ. ಈ ಬಗ್ಗೆ ವಿವರ ಪಡೆಯುತ್ತೇವೆ ಎಂದು ಆಂಗ್ಸಾನ್ ಸೂ ಕಿ ಅವರ ಕಾನೂನು ಸಲಹೆಗಾರರ ತಂಡ ಹೇಳಿದೆ.
ಫೆಬ್ರವರಿ 1ರಂದು ಸೇನೆ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಅಧಿಕಾರ ಕಳೆದುಕೊಂಡಿರುವ ಸೂ ಕಿ, ಅಂದಿನಿಂದ ಬಂಧನಲ್ಲಿದ್ದಾರೆ. ರಾಜಧಾನಿ ನೇಪಿಡಾವ್ಯ ನ್ಯಾಯಾಲಯದಲ್ಲಿ ಸೂ ಕಿ ವಿರುದ್ಧ ವಾಕಿಟಾಕಿ ರೇಡಿಯೋಗಳನ್ನು ಹೊಂದಿರುವುದು ಮತ್ತು ಕಾನೂನು ಬಾಹಿರವಾಗಿ ಆಮದು ಮಾಡಿಕೊಂಡಿರುವುದು, ಕೊರೋನ ಸೋಂಕಿನ ವಿರುದ್ಧದ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣ ದಾಖಲಾಗಿದೆ.








