3 ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಖ್ಯಾತ ನಟಿ ಸುರೇಖಾ ಸಿಕ್ರಿ ವಿಧಿವಶ
ಮುಂಬೈ: ಅನೇಕ ದಾರವಾಹಿ ಹಾಗೂ ಸಿನಿಮಾರಂಗದಲ್ಲಿ ನಟಿಸಿ, ತಮ್ಮ ಅದ್ಭುತ ನಟನೆಗಾಗಿ 3 ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಖ್ಯಾತ ನಟಿ ಸುರೇಖಾ ಸಿಕ್ರಿ (75) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುರೇಖಾ ಸಿಕ್ರಿಯವರು ಬಧಾಯಿ ಹೊ ಚಿತ್ರ ಹಾಗೂ ಬಾಲಿಕಾ ವಧು ಧಾರವಾಹಿಗಳ ಪಾತ್ರಗಳಿಂದಲೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಕೆಲಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಸಿಕ್ರಿ ಇದೀಗ ವಿಧಿವಶರಾಗಿದ್ದಾರೆ.
1978ರಲ್ಲಿ ತಮ್ಮ ನಟನೆ ಪ್ರಾರಂಭಿಸಿದ ಸಿಕ್ರಿ ಅವರು ಕಿಸ್ಸಾ ಕುರ್ಸಿ ಕಾ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ನಂತರ ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ಸತತವಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಚಿರಪರಿಚಿತರಾಗಿದ್ದರು.
ಹಿಂದಿಯ ಖ್ಯಾತ ಧಾರವಾಹಿಗಳಲ್ಲೂ ಕಾಣಿಸಿಕೊಂಡಿರುವ ಅವರು ಕಿರುತೆರೆಯಲ್ಲೂ ಪ್ರಸಿದ್ಧಿ ಗಳಿಸಿದರು.. 2018ರಲ್ಲಿ ಆಯುಷ್ಮಾನ್ ಖುರಾನಾ ನಟಿಸಿದ ಬಧಾಯಿ ಹೊ ಚಿತ್ರದಲ್ಲಿ ಅಜ್ಜಿಯಾಗಿ ನಟಿಸಿದ ಅವರ ಪಾತ್ರ ಅಪಾರ ಜನಮೆಚ್ಚುಗೆ ಪಡೆದಿತ್ತು. ಸುರೇಖಾ ಸಿಕ್ರಿಯವರು 2019, 1995 ಹಾಗೂ1988ರಲ್ಲಿ ತಮ್ಮ ಅತ್ಯುತ್ತಮ ನಿರ್ವಹಣೆಗಾಗಿ ಉತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಇದರೊಂದಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.