ಬೆಂಗಳೂರು : ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಹೆಮ್ಮಾರಿ ಕೊರೊನಾ ಸೋಂಕು ದಿನೇ ದಿನೇ ತನ್ನ ಕಬಂದ ಬಾಹುಗಳನ್ನು ಕ್ಷಿಪ್ರಗತಿಯಲ್ಲಿ ಚಾಚುತ್ತಲೇ ಇದೆ. ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 489 ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಮಹಾರಾಷ್ಟ್ರ, ತಮಿಳುನಾಡು ಬಳಿಕ ಕರ್ನಾಟಕದಲ್ಲೂ ವಿಡಿಯೋ ಜರ್ನಲಿಸ್ಟ್ ಒಬ್ಬರಿಗೆ ಮಾರಕ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ವರದಿ ಮಾಡಲು ಕೊರೊನಾ ಸೋಂಕು ಪೀಡಿತ ರೆಡ್ ಝೋನ್, ಕಂಟೈನ್ ಮೆಂಟ್ ಪ್ರದೇಶಗಳಿಗೆ ತೆರಳುತ್ತಿದ್ದು, ಈ ವೇಳೆ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಪತ್ರಕರ್ತರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಪತ್ರಕರ್ತರು ಕೊರೊನಾ ಟೆಸ್ಟ್ ಗೆ ಒಳಗಾಗಿದ್ದಾರೆ. ಈ ವೇಳೆ, ಖಾಸಗಿ ಚಾನೆಲ್ ವೊಂದರ ವಿಡಿಯೋ ಜರ್ನಲಿಸ್ಟ್ ಒಬ್ಬರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕು ಪೀಡಿತ ಪತ್ರಕರ್ತ ಕೆಲ ದಿನಗಳ ಹಿಂದೆ ರೆಡ್ ಝೋನ್ ನಲ್ಲಿದ್ದ ಪ್ರದೇಶಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ.









