ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಮಟಾಶ್..!
ಕಣಿವೆ ನಾಡು ಜಮ್ಮು – ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೊರ್ ಪಟ್ಟಣ ವ್ಯಾಪ್ತಿಯಲ್ಲಿ ತಡರಾತ್ರಿ ಭದ್ರತಾ ಪಡೆಗಳು ಎನ್ ಕೌಂಟರ್ ನಡೆಸಿದ್ದು ಇಬ್ಬರು ಉಗ್ರರ ಕಥೆ ಮುಗಿಸಿದ್ದಾರೆ. ಹತರಾಗಿರುವವರಲ್ಲಿ ಒಬ್ಬನನ್ನು ಉಗ್ರ ಫಯಾಸ್ ವಾರ್ ಎಂದು ಗುರುತಿಸಲಾಗಿದೆ. ಈತ ಹಲವು ದಾಳಿಗಳು, ಹಿಂಸಾಚಾರ ಮತ್ತು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ. ಉತ್ತರ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಈತ ಸಂಚು ರೂಪಿಸಿದ್ದ ಎಂದು ಕಾಶ್ಮೀರ ವಯಲದ ಐಜಿಪಿ ವಿಜಯ್ ಕುಮಾರ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಟ್ವೀಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಇನ್ನೂ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ, ಸೊಪೊರ್‌ನ ವಾರ್ಪೊರದಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ಆರಂಭಿಸಿದ ಭದ್ರತಾ ಪಡೆಗಳು, ಆ ಪ್ರದೇಶದಲ್ಲಿದ್ದ ಪ್ರತಿ ಮನೆಯಲ್ಲೂ ಶೋಧ ಕಾರ್ಯ ಕೈಗೊಂಡವು. ನಂತರ ಉಗ್ರರಿಗೆ ಶರಣಾಗುವಂತೆ ತಿಳಿಸಿದರು. ಶರಣಾಗತಿಗೆ ಒಪ್ಪದ ಉಗ್ರರು, ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದರು.
ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಉಳಿದಂತೆ ಯಾವುದೇ ರೀತಿಯ ಅಪಾಯಗಳು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿಯನ್ನು ಐಜಿಪಿ ವಿಜಯ್ ಕುಮಾರ್ ಅಭಿನಂದಿಸಿದ್ದಾರೆ. ಈ ವರ್ಷದ ಆರಂಭದಿಂದ ಇಲ್ಲಿವರೆಗೆ ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ 80 ಉಗ್ರರನ್ನು ಕೊಂದಿದ್ದಾರೆ.