ಮಲೆನಾಡಿನಲ್ಲಿ ಭಾರಿ ಮಳೆ.. ಪ್ರವಾಹ ಭೀತಿ
ಶಿವಮೊಗ್ಗ : ರಾಜ್ಯದ ಮಲೆನಾಡು ಭಾಗದಲ್ಲಿ ಭಾರಿ ವರ್ಷಧಾರೆ ಆಗುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ನಿರಂತರ ಮಳೆಯಿಂದಾಗಿ ನದಿಗಳೆಲ್ಲಾ ತುಂಬಿ ಹರಿಯುತ್ತಿದ್ದು, ರಸ್ತೆಗಳ ಮೇಲೆ ನೀರು ಹರಿಯುತ್ತಿವೆ.
ಇದರಿಂದ ವಾಹನಗಳ ಸಂಚಾರಕ್ಕೆ ಸಹ ಅಡ್ಡಿಯಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನದಿ ನೀರು ರಸ್ತೆಗಳ ಮೇಲೆ ಹಿರಯುತ್ತಿರುವುದರಿಂದ ಕೆಲ ರಸ್ತೆಗಳು ಬಂದ್ ಆಗಿವೆ. ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿಯ ಗುಡ್ಡ ಕುಸಿದ ಹಿನ್ನೆಲೆ ತೀರ್ಥಹಳ್ಳಿ- ಆಗುಂಬೆ ರಸ್ತೆ ಬಂದ್ ಆಗಿದೆ.
ಜೊತೆಗೆ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ರಸ್ತೆ ಮೇಲೆ ಸಹ ನೀರು ಹರಿಯುತ್ತಿದೆ. ಸಾಗರ ತಾಲೂಕಿನ ಇರುವಕ್ಕಿ ಹಾಗೂ ಕರಡಿ ಗ್ರಾಮದ ರಸ್ತೆ ಸಂಪರ್ಕ ಸಹ ಸ್ಥಗಿತಗೊಂಡಿದೆ.
ಇತ್ತ ತುಂಗಾ ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ನೀರು ಹರಿ ಬಿಡುತ್ತಿರುವುದರಿಂದ ಶಿವಮೊಗ್ಗದ ನದಿ ಪಾತ್ರದ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ.
ಮುಖ್ಯವಾಗಿ ಶಿವಮೊಗ್ಗ ಶಾಂತಮ್ಮ ಲೇಔಟ್, ಕುಂಬಾರಗುಂಡಿ, ಮೊಹಮ್ಮದ್ ನಗರ ಸೇರಿದಂತೆ ಇತರೆ ಭಾಗದ ಜನರನ್ನು ಗಂಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಇನ್ನು ಮಳೆ ಹಾನಿ ಪ್ರದೇಶಗಳಿಗೆ ಶಾಸಕರು ಭೇಟಿ ನೀಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ.










