ನನಗೆ ಜೀವನದಲ್ಲಿ ಆಸೆ ಇದೆ, ದುರಾಸೆ ಇಲ್ಲ : ಗೋವಿಂದ ಕಾರಜೋಳ
ಬಾಗಲಕೋಟೆ : ನನಗೆ ಜೀವನದಲ್ಲಿ ಆಸೆ ಇದೆ. ಆದ್ರೆ ದುರಾಸೆ ಇಲ್ಲ ಎಂದು ಸಿಎಂ ರೇಸ್ ನಲ್ಲಿ ತಮ್ಮ ಹೆಸರು ಪ್ರಸ್ತಾಪ ಕುರಿತು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರವಾಹದಿಂದ ತೊಂದರೆ ಆಗಿರುವ ಮುಧೋಳ ತಾಲೂಕಿನ ಮಿರ್ಜಿ ಗ್ರಾಮಕ್ಕೆ ಶನಿವಾರ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಶಕ್ತಿಯುತವಾಗಿದೆ. ನಮ್ಮ ನಾಯಕರಾದ ಯಡಿಯೂರಪ್ಪ, ಪ್ರವಾಹ ಮತ್ತು ಕೊರೊನಾ ಮದ್ಯೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ.
ನನಗೆ ಗೊತ್ತಿಲ್ಲ, ನನ್ನ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರಿಗೆ ಯಾವುದೇ ಸೂಚನೆ ಇಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾರೆ, ಮುಂದೇನೂ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದರು.
ಇದೇ ವೇಳೆ ಸಿಎಂ ರೇಸ್ ನಲ್ಲಿ ತಮ್ಮ ಹೆಸರು ಕೇಳಿಬಂದ ವಿಚಾರವಾಗಿ ಮಾತನಾಡಿ, ಬಹಳ ಸ್ವಾಭಾವಿಕವಾಗಿ ನೀವು ಕೇಳಿದ್ದೀರಿ. ನನಗೆ ಜೀವನದಲ್ಲಿ ಆಸೆ ಇದೆ. ಆದ್ರೆ ದುರಾಸೆ ಇಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.