ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ ಬರೋಬ್ಬರಿ 26 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿಯೇ 13 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಳಗಾವಿಯಲ್ಲಿ 9, ಮಂಡ್ಯದಲ್ಲಿ 1, ಮೈಸೂರಿನಲ್ಲಿ 1 ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನ ಹೊಂಗಸಂದ್ರದ ಬಿಹಾರಿ ಮೂಲದ ಕಾರ್ಮಿಕನ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. 19 ವರ್ಷದ ಯುವತಿ ಸೇರಿ 37, 21, 17, 28 ವರ್ಷದ ವ್ಯಕ್ತಿಗಳಿಗೆ ಸೋಂಕು ತಗುಲಿದೆ.
ಬೆಳಗಾವಿ ಹಿರೇಬಾಗೇವಾಡಿಯ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ ಓರ್ವ ವ್ಯಕ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಓರ್ವ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರಿನ ನಂಜನಗೂಡಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಒಟ್ಟಾರೆ ಬೆಂಗಳೂರು ನಗರದಲ್ಲಿ 133, ಮೈಸೂರಿನಲ್ಲಿ 89 , ಬೆಳಗಾವಿಯಲ್ಲಿ 54, ವಿಜಯಪುರದಲ್ಲಿ 39, ಕಲಬುರಗಿಯಲ್ಲಿ 36, ಬಾಗಲಕೋಟೆಯಲ್ಲಿ 24, ಚಿಕ್ಕಬಳ್ಳಾಪುರದಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೆ 158 ಜನರು ಗುಣಮುಖರಾಗಿದ್ದು, 18 ಜನರು ಮೃತಪಟ್ಟಿದ್ದಾರೆ.








