ಪ್ರತಿದಿನ ಕೊರೋನಾ ಸೋಂಕು ಪ್ರಕರಣಗಳ ಏರಿಕೆಯಿಂದ ಆತಂಕಿತರಾಗಿದ್ದ ರಾಜ್ಯದ ಜನತೆ ಇಂದು ಒಂದೇ ಹೊಸ ಪ್ರಕರಣ ಪತ್ತೆಯಾಗಿರುವುದರಿಂದ, ಸ್ವಲ್ಪ ಮಟ್ಟಿಗೆ ಸಮಾಧಾನ ಪಡುವಂತಾಗಿದೆ.
ಇಂದು 47 ವರ್ಷದ ಬಂಟ್ವಾಳದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯದ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದ್ದು, ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕು ಪ್ರಕರಣ 19ಕ್ಕೆ ಏರಿಕೆಯಾಗಿದೆ. ಇವರಲ್ಲಿ 12 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 5 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾದಿಂದ ಮೃತಪಟ್ಟ ವೃದ್ಧೆ ದಾಖಲಾಗಿದ್ದ ಆಸ್ಪತ್ರೆಯ ಆಯಾ (ರೋಗಿ ನಂಬರ್ 501)ಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ ಮಹಿಳೆಯನ್ನು ಮಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಬಂಟ್ವಾಳದ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ವೃದ್ಧೆ ಸಾವನ್ನಪ್ಪಿದ್ದ ಬಳಿಕ ಆಸ್ಪತ್ರೆಯ ಸಿಬ್ಬಂದಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವ ಜೊತೆಗೆ ಆಸ್ಪತ್ರೆಯನ್ನು ಸುಪರ್ವೈಸ್ಡ್ ಐಸೋಲೆಟೆಡ್ ಸೆಂಟರ್ ಆಗಿ ಗುರುತಿಸಲಾಗಿತ್ತು ಮತ್ತು ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶವನ್ನು ಕ್ವಾರಂಟೈನ್ ಮಾಡಲಾಗಿತ್ತು. ಕೊರೋನಾ ಸೋಂಕು ಪತ್ತೆಯಾಗಿರುವ ಆಯಾ, ಬಂಟ್ವಾಳದ ನರಿಕೊಂಬು ಗ್ರಾಮದ ನಾಯಿಲದವರಾಗಿದ್ದು, ನಾಯಿಲ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.








