“ಗಡ್ಡಧಾರಿ ಸಿಎಂ ಆಗ್ತಾರೆ ಎಂಬ ಭವಿಷ್ಯವಾಣಿ” : ಅಚ್ಚರಿ ಹೇಳಿಕೆ ಕೊಟ್ಟ ಸಿ.ಟಿ.ರವಿ
ಬೆಂಗಳೂರು : ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿ ಇನ್ನೂ ಒಂದು ವಾರ ಆಗಿಲ್ಲ. ಆಗಲೇ ಮುಖ್ಯಮಂತ್ರಿ ಬದಲಾವಣೆ ಮಾತುಗಳು ಕೇಳಿಬರುತ್ತಿವೆ.
ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.
ಅದರಲ್ಲೂ 2022ರ ಮಾರ್ಚ್‍ನಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ ಆಗ್ತಾರೆ ಎಂದು ವೆಂಕಪ್ಪಯ್ಯ ಒಡೆಯರ್ ನುಡಿದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದೀಗ ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಸಿಎಂ ಆಗೋಕೆ ಯೋಗಬೇಕು. ಅದು ಬೊಮ್ಮಾಯಿ ಅವರಿಗೆ ಇದೆ. ನಾನು ಸಿಎಂ ಆಗಲು ಗಡ್ಡ ಬಿಟ್ಟಿಲ್ಲ. ಗಡ್ಡ ಬಿಟ್ಟಾಕ್ಷಣ ಸಿಎಂ ಆಗಲ್ಲ’ ಎಂದು ಹೇಳಿದ್ದಾರೆ.
ಇನ್ನು ನನಗೆ ಕಾಲೇಜು ದಿನಗಳಿಂದಲೂ ಗಡ್ಡ ಬಿಡುವ, ಹಣೆಗೆ ಕುಂಕುಮ ಇಡುವ, ಕಿವಿಗೆ ಟಿಕ್ಕಿ ಹಾಕುವ ಹವ್ಯಾಸ ಇದೆ. ಗಡ್ಡ ಬಿಟ್ಟಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ. ನನ್ನನ್ನು ನೋಡಿದಾಕ್ಷಣ ಸಿಟಿ ರವಿ ಎಂಬುದು ಗೊತ್ತಾಗಲಿ ಎಂದೇ ನಾನು ಹೀಗಿರುವೆ ಎಂದು ಸಿ.ಟಿ.ರವಿ ಸ್ಪಷ್ಟನೆ ಕೊಟ್ಟರು.









