ಜಕಾರ್ತಾ : ಕೊರೊನಾ ವೈರಸ್ ಸೋಂಕು ಶಂಕಿತರು ಕ್ವಾರಂಟೈನ್ ನಲ್ಲಿ ಇರಬೇಕಾದ್ದು ಕಡ್ಡಾಯ. ಆದರೆ, ಕೆಲವರು ಈ ನಿಯಮವನ್ನು ಪಾಲಿಸುತ್ತಿಲ್ಲ. ಅದಕ್ಕೆ ಇಂಡೋನೇಷ್ಯಾವೂ ಹೊರತಲ್ಲ. ಆದರೆ, ಕ್ವಾರಂಟೈನ್ ನಿಯಮ ಉಲ್ಲಂಘಿಸುವವರಿಗೆ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ವಿಧಿಸುತ್ತಿರುವ ಶಿಕ್ಷೆ ವಿಚಾರ ಈಗ ವಿಶ್ವದ ಮನೆಮಾತಾಗಿದೆ.
ಇಂಡೋನೇಷ್ಯಾದಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಕರಿಗೆ ಕೊರತೆಯೇನೂ ಇಲ್ಲ. ಎಲ್ಲ ರೀತಿಯಲ್ಲಿ ತಿಳಿ ಹೇಳಿ, ದಂಡ ವಿಧಿಸಿದರೂ ಜಗ್ಗದ ಮೊಂಡರಿಗೆ ವಿಧಿಸಬೇಕಾದ ಶಿಕ್ಷೆ ಹೇಗಿರಬೇಕು ಎಂಬುದಕ್ಕೆ ಜಾವಾದ ಲೋಕಲ್ ರಾಜಕೀಯ ನೇತಾರ ಒಂದು ಸಲಹೆ ನೀಡಿದ್ದಾರೆ. ಈ ಸಲಹೆಯಂತೆ ಅಲ್ಲಿನ ಸೆಪಾಟ್ ಗ್ರಾಮದಲ್ಲಿ ನಿಯಮ ಉಲ್ಲಂಘಕರ ಬಂಧನ ಶುರುವಾಯಿತು. ಎಲ್ಲರನ್ನೂ ಕೂಡಿ ಹಾಕಿ ಕ್ವಾರಂಟೈನ್ ನಲ್ಲಿ ಇರಿಸಲು ಅವರು ಕಂಡುಕೊಂಡದ್ದು ಯಾವುದೋ ಕಾಲೇಜು ಕಟ್ಟಡವೋ, ಶಾಲಾ ಕಟ್ಟಡವನ್ನೋ ಅಲ್ಲ. ಬದಲಾಗಿ ಭೂತ ಬಂಗ್ಲೆಗಳನ್ನು..!
ಹೌದು..! ಸೆಪಾಟ್ ಗ್ರಾಮದಲ್ಲಿ ಅಂತಹ ಅನೇಕ ಪುರಾತನ ಮನೆಗಳಿವೆ. ದೆವ್ವಗಳ ಕಾಟದ ಕಾರಣಕ್ಕೆ ಆ ಮನೆಗಳಲ್ಲಿ ಜನವಾಸ ಇರಲಿಲ್ಲ. ಈಗ ಆ ಮನೆಗಳನ್ನು ಸ್ವಚ್ಛಗೊಳಿಸಿ ಅಲ್ಲಿ ಈ ಕ್ವಾರಂಟೈನ್ ಉಲ್ಲಂಘಕರನ್ನು ಕರೆದೊಯ್ದು ಅಲ್ಲಿ ಕೂಡಿ ಹಾಕಿ ಹೊರಗಿಂದ ಬೀಗ ಹಾಕುವ ಕೆಲಸವನ್ನು ಅಲ್ಲಿನ ಸ್ಥಳೀಯಾಡಳಿತ ಮಾಡತೊಡಗಿದೆ. ಇದು ಪರಿಣಾಮ ಬೀರಿದ್ದು, ನಿಯಮ ಉಲ್ಲಂಘಕರ ಸಂಖ್ಯೆ ಕಡಿಮೆಯಾಗತೊಡಗಿದೆ ಎನ್ನುತ್ತಿವೆ ಮೂಲಗಳು.








