ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಅನಂತ್ ಕುಮಾರ್ ಹೆಗಡೆ ಅವರಿಗೆ ನೋಟಿಸ್ ನೀಡಿದ್ದು ನಿರ್ದಿಷ್ಟ ಟ್ವೀಟ್ ತೆಗೆದುಹಾಕುವಂತೆ ಸೂಚನೆ ನೀಡಲಾಗಿದೆ. ಆದರೆ ಇದಕ್ಕೆ ಕ್ಯಾರೆ ಎನ್ನದ ಅನಂತ್ ಕುಮಾರ್ ಹೆಗಡೆ ಟ್ವೀಟ್ ಅಳಿಸುವ ಪ್ರಶ್ನೆಯೇ ಇಲ್ಲವೆಂದು ಖಡಕ್ ಆಗಿ ಹೇಳಿದ್ದಾರೆ.
ಅನಂತ್ ಕುಮಾರ್ ಹೆಗಡೆ ಅವರು ಮಾಡಿರುವ ಪೋಸ್ಟ್ ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದ್ದು, ಅವರ ಖಾತೆಯನ್ನು ಲಾಕ್ ಮಾಡಲಾಗಿದೆ. ಅನ್ಲಾಕ್ ಮಾಡಲು ನಿಯಮ ಉಲ್ಲಂಘನೆ ಆಗಿರುವ ನಿರ್ದಿಷ್ಟ ಟ್ವೀಟ್ ತೆಗೆದುಹಾಕುವಂತೆ ಸೂಚನೆ ನೀಡಿದೆ. ಈ ಕುರಿತಾಗಿ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅನಂತ್ ಕುಮಾರ್ ಹೆಗಡೆ, ಟ್ವಿಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಭಾರತದ ವಿರೋಧಿ ನೀತಿಯನ್ನು ಟ್ವಿಟ್ಟರ್ ಅನುಸರಿಸುತ್ತಿದೆ. ತಬ್ಲಿಕ್ ಜಮಾತ್ ವಿರುದ್ಧ ಏಪ್ರಿಲ್ 22ರಂದು ಮಾಡಿದ್ದ ಟ್ವೀಟ್ ನೆಪವಾಗಿಸಿ ಖಾತೆಯನ್ನು ರದ್ದು ಮಾಡಲಾಗಿದೆ. ಆ ಟ್ವೀಟ್ ತೆಗೆದರೆ ಖಾತೆಯನ್ನು ಸಕ್ರಿಯಗೊಳಿಸುವುದಾಗಿ ಹೇಳಲಾಗಿದೆ. ಆದರೆ ನಾನು ಮಾಡಿರುವ ಟ್ವೀಟ್ ಅಳಿಸುವ ಪ್ರಶ್ನೆಯೇ ಇಲ್ಲ” ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದ್ದಾರೆ.