ಎನ್.ಮಹೇಶ್ ಬಾಯಲ್ಲಿ ಭೀಮ, ಹೃದಯದಲ್ಲಿ ರಾಮ, ಜನತೆಗೆ ಪಂಗನಾಮ
ಚಾಮರಾಜನಗರ : ಬಿಎಸ್‍ಪಿ ಶಾಸಕ ಎನ್.ಮಹೇಶ್ ಇಂದು ಬಿಜೆಪಿ ಸೇರಿದ್ದು, ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ “ಬಾಯಲ್ಲಿ ಭೀಮ, ಹೃದಯದಲ್ಲಿ ರಾಮ, ಕೊಳ್ಳೇಗಾಲ ಜನತೆಗೆ ಪಂಗನಾಮ ಎಂಬುದು ಬಿಜೆಪಿ ಸೇರಿದ ಶಾಸಕ ಎನ್.ಮಹೇಶ್ ಗೆ ಅನ್ವಯ ಆಗಲಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಿಮಾನವಿಲ್ಲದ ಬದುಕು ಶೂನ್ಯ ಎಂದು ಬಾಬಾ ಸಾಹೇಬರು ಹೇಳಿದ್ದರು. ಮಹೇಶ್ ಗೆದ್ದಿರುವುದು ಆನೆ ಗುರುತಿನಲ್ಲಿ, ಈಗ ಕಮಲಕ್ಕೆ ಸೇರುತ್ತಿರುವುದರಿಂದ ನೈತಿಕತೆ ಪ್ರದರ್ಶಿಸಿ ಬಾಂಬೆ ಬಾಯ್ಸ್ ರೀತಿ ಚುನಾವಣೆ ಎದುರಿಸಬೇಕು. ದಲಿತ ಸಮುದಾಯ ಮಹೇಶ್ ಅವರಿಗೆ ಕೊಟ್ಟಷ್ಟು ವ್ಯಾಪಕ ಬೆಂಬಲ ಯಾರಿಗೂ ಕೊಟ್ಟಿರಲಿಲ್ಲ. ಈಗ ನೀಲಿ ಶಾಲು ಹೋಗಿ ಕೇಸರಿ ಶಾಲು ಬಂದಿದೆ. ಅಂಬೇಡ್ಕರ್, ಕಾನ್ಷಿರಾಂ, ಮಾಯಾವತಿ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದವರು ಈಗ ಎಡವಿದ್ದಾರೆ ಎಂದು ಟೀಕಿಸಿದರು.

ಇನ್ನು ಕೊಳ್ಳೆಗಾಲದ ಶಾಸಕ ಎನ್ ಮಹೇಶ್ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎನ್.ಮಹೇಶ್ ಅವರು ಕಮಲ ಹಿಡಿದರು. ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಮಹೇಶ್ ಬಿಜೆಪಿಗೆ ಸೇರ್ಪಡೆಯಾದರು.








