`ಬೆಳ್ಳಿ ಹುಡುಗಿ’ ಮೀರಾಬಾಯಿಗೆ ಬರ್ತ್ ಡೇ ಸಂಭ್ರಮ
ಬೆಂಗಳೂರು : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪರ ಬೆಳ್ಳಿ ಪದಕ ಗೆದ್ದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ಮೀರಾಬಾಯಿ ಚಾನು ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 27ನೇ ವರ್ಷಕ್ಕೆ ಕಾಲಿಡುತ್ತಿರುವ ಮೀರಾಬಾಯಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಅಂದಹಾಗೆ ಮೀರಾಬಾಯಿ ಚಾನು ಜನಸಿದ್ದು, 1994ರ ಆಗಸ್ಟ್ 8ರಂದು. ಮಣಿಪುರದ ನಾಂಗ್ಪಾಂಕ್ ಕಕ್ಚಿಂಗ್ ಇಂಫಾಲ ಇವರ ಜನ್ಮಸ್ಥಳ. ಚಿಕ್ಕಂದಿನಿಂದಲೇ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಮೀರಾ, ಇದೀಗ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.
48 ಕೆ.ಜಿ ವಿಭಾಗದಲ್ಲಿ 2014ರಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಿಯಮಿತವಾಗಿ ಭಾಗವಹಿಸಿದ ಅವರು, ಕಾಮನ್ ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್‍ಶಿಪ್ ಪಂದ್ಯಗಳಲ್ಲಿ ಅನೇಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಕ್ರೀಡಾ ಸಾಧನೆ ಗುರುತಿಸಿದ ಭಾರತ ಸರ್ಕಾರ 2018ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ನೀಡಿ ಗೌರವಿಸಿದೆ.









