ಕ್ಯಾಬಿನೆಟ್ ವಿಸ್ತರಣೆಯ ಸ್ಮಾರ್ಟ್ ಪ್ಲಾನ್; ಕುಸುರಿತನವಿಲ್ಲದ ಖಾತೆ ಹಂಚಿಕೆಯ ಕಸರತ್ತು:
ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಳಿ ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಖಾತೆಗಳನ್ನಿಟ್ಟುಕೊಂಡಿದ್ದಾರೆ. ಆದರೆ ಯಾರೂ ಊಹಿಸದಂತೆ ಪವರ್ಫುಲ್ ಖಾತೆಗಳನ್ನು ಮೊದಲ ಬಾರಿಗೆ ಸಚಿವರಾದವರಿಗೆ ನೀಡಿದ್ದು ಮಾತ್ರ ವಿಶೇಷ. ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಆಗ್ತಾರೆ ಅಂತ ಸ್ವತಃ ಅರಗ ಸಹ ಕಲ್ಪಿಸಿಕೊಂಡಿರಲಿಕ್ಕಿಲ್ಲ. ಇನ್ನು ರೆಬೆಲ್ ಪಾಳೆಯದ ಕಾರ್ಕಳ ಸುನಿಲ್ ಕುಮಾರ್, ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆಯನ್ನು, ಸಿ.ಸಿ.ಪಾಟೀಲ್ ಮತ್ತೊಂದು ಪ್ರಭಾವಿ ಖಾತೆ ಲೋಕೋಪಯೋಗಿಯನ್ನೂ ಹಾಗೂ ಹಾಲಪ್ಪ ಆಚಾರ್, ಗಣಿ ಮತ್ತು ಭೂ ವಿಜ್ಞಾನ ಖಾತೆಯ ಜೊತೆ ಮಹಿಳಾ ಮತ್ತು ಕಲ್ಯಾಣ ಖಾತೆಯನ್ನೂ ಪಡೆದುಕೊಂಡಿದ್ದು ಶಕ್ತಿಕೇಂದ್ರದ ಪಡಸಾಲೆಯಲ್ಲೇ ಸಂಚಲನ ಸೃಷ್ಟಿಸಿದೆ.
ಮೊದಲ ಬಾರಿಗೆ ಸಚಿವರಾಗುತ್ತಿರುವ ಮುನಿರತ್ನ, ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಖಾತೆ ವಹಿಸಿಕೊಂಡಿದ್ದಾರೆ. ಹಾಗೆಯೇ ಸಜ್ಜನ ಸಚಿವ ಟ್ಯಾಗ್ ಲೈನ್ ಹೊಂದಿದ್ದ ಸುರೇಶ್ ಕುಮಾರ್ ತ್ಯಾಗ ಮಾಡಿದ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಖಾತೆಯನ್ನು ಬಿ. ಸಿ ನಾಗೇಶ್ ಗೆ ನೀಡಿದ್ದು ಇನ್ನೊಂದು ಅಚ್ಚರಿಯಾದ್ರೆ, ಸಾಹುಕಾರ ರಮೇಶ್ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆ ಗೋವಿಂದ ಕಾರಜೊಳ ಪಾಲಾಗಿದೆ. ಸುಮಾರು ೧೩ ಸಚಿವರು ಅದರಲ್ಲೂ ಬಾಂಬೆ ಫ್ರೆಂಡ್ಸ್ ಹಿಂದೆ ತಾವು ನಿರ್ವಹಿಸುತ್ತಿದ್ದ ಖಾತೆಗಳನ್ನೇ ಮರಳಿ ಪಡೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೋಳಿ ಬಂಡಾಯಕ್ಕೆ ಬಾಂಬೆ ಮಿತ್ರಮಂಡಳಿಯ ಸದಸ್ಯರು ಸಾಥ್ ನೀಡಬಾರದು ಅನ್ನುವ ಉದ್ದೇಶದಿಂದ ಅವರು ಮನವಿ ಮಾಡಿಕೊಂಡಂತೆಯೇ ಖಾತೆಗಳನ್ನು ಮುಂದುವರೆಸಲಾಗುತ್ತಿದೆ ಎನ್ನಲಾಗಿದೆ.
ವಲಸಿಗರಾದ ಎಂ.ಟಿ.ಬಿ ನಾಗರಾಜ್, ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ, ಎಸ್.ಟಿ ಸೋಮಶೇಖರ್ ಸಹಕಾರ ಖಾತೆಯಲ್ಲಿ, ಯಲ್ಲಾಪುರದ ಶಿವರಾಂ ಹೆಬ್ಬಾರ್ ಕಾರ್ಮಿಕ ಖಾತೆಯಲ್ಲಿ, ಎಂ. ಕೆ ಗೋಪಾಲಯ್ಯ ಅಬಕಾರಿ ಖಾತೆಯಲ್ಲಿ, ಡಾ. ಕೆ ಸುಧಾಕರ್ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯಲ್ಲಿ, ಬಿ.ಸಿ ಪಾಟೀಲ್ ಕೃಷಿ ಖಾತೆಯಲ್ಲಿ, ಕೆ.ಸಿ ನಾರಾಯಣ ಗೌಡ- ರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ ಖಾತೆಯಲ್ಲಿ ಮುಂದುವರೆಯಲಿದ್ದಾರೆ. ಇನ್ನು ಖಾತೆ ಬದಲಾವಣೆ ಮಾಡಿಕೊಂಡ ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯಲ್ಲಿ ಮತ್ತು ಡಿಸಿಎಂ ಆಗಿದ್ದ ಲಕ್ಷ್ಮಣ್ ಸವದಿ ಜಾಗದಲ್ಲಿ ಶ್ರೀರಾಮುಲು ಸಾರಿಗೆ ಹಾಗೂ ಎಸ್ ಟಿ ಕಲ್ಯಾಣ ಖಾತೆಯಲ್ಲಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಕೈಮಗ್ಗ ಮತ್ತು ಜವಳಿ, ಸಕ್ಕರೆ ಖಾತೆಯಲ್ಲಿ, ಮೊಟ್ಟೆ ಹಗರಣದ ಕುಖ್ಯಾತಿ ಹೊಂದಿರುವ ಶಶಿಕಲಾ ಜೊಲ್ಲೆ ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆಯಲ್ಲಿ ತಮ್ಮ ಸಚಿವಗಿರಿ ನಡೆಸಲಿದ್ದಾರೆ.
ಉಳಿದಂತೆ ಆರ್.ಅಶೋಕ್-ಕಂದಾಯ ಇಲಾಖೆ, ಉಮೇಶ್ ಕತ್ತಿ- ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಮತ್ತು ಹೆಚ್ಚುವರಿಯಾಗಿ ಅರಣ್ಯ, ಮಾಧುಸ್ವಾಮಿ- ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ, ಕೆ.ಎಸ್. ಈಶ್ವರಪ್ಪರವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೋಟಾ ಶ್ರೀನಿವಾಸ್ ಪೂಜಾರಿ- ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ, ವಿ ಸೋಮಣ್ಣ-ವಸತಿ ಖಾತೆ, ಡಾ. ಸಿ. ಎನ್ ಅಶ್ವಥ ನಾರಾಯಣ-ಉನ್ನತ ಶಿಕ್ಷಣ, ಐಟಿ-ಬಿಟಿ, ಬೈರತಿ ಬಸವರಾಜ್- ನಗರಾಭಿವೃದ್ಧಿ, ಆನಂದ್ ಸಿಂಗ್- ಪರಿಸರ, ವನ್ಯಜೀವಿ ಹಾಗೂ ಪ್ರವಾಸೋದ್ಯಮ, ಪ್ರಭು ಚೌಹಾಣ್- ಪಶು ಸಂಗೋಪನೆ ಖಾತೆ, ಎಸ್ ಅಂಗಾರ- ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಹೊಣೆ ಹೊತ್ತುಕೊಳ್ಳುತ್ತಿದ್ದಾರೆ. ಬಂಡಾಯದ ಬಾವುಟ ಹಾರಿಸಬಹುದಾದ ಕೆಲವರಿಗೆ ಎರಡೆರಡು ಖಾತೆಗಳನ್ನು ಕೊಟ್ಟಿದ್ದೂ ಒಂದು ರಾಜಕಾರಣವೇ! ಗದ್ದಲ ಮಾಡುವ ಮಕ್ಕಳಿಗೆ ಹೆಚ್ಚು ಕೆಲಸದ ಹೊಣೆ ಹಚ್ಚಿಬಿಟ್ಟರೇ ಗದ್ದಲ ಮಾಡಲು ಅವಕಾಶ ಸಿಗುವುದಿಲ್ಲವಲ್ಲ ಇದು ಬಿಎಸ್ವೈ ಲೆಕ್ಕಾಚಾರ.









