ನಮ್ಮ ಯೋಜನೆಗಳ ಹೆಸರು ಬದಲಿಸೋದೆ ಮೋದಿ ಸಾಧನೆ : ಸತೀಶ್ ಜಾರಕಿಹೊಳಿ
ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 7 ವರ್ಷಗಳ ಆಡಳಿತದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳನ್ನು ಮಾಡಲಿಲ್ಲ. ನಮ್ಮ ಯೋಜನೆಗಳ ನೇಮ್, ಬೋರ್ಡ್ ಬದಲಾವಣೆ ಮಾಡಿ ಅದನ್ನು ತಮ್ಮ ಸಾಧನೆ ಎಂದು ದೇಶದ ಎದುರು ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಂಬಂಧ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡೋದ್ರಿಂದ ಜನರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಮತ್ತು ಅದರಿಂದ ದೊಡ್ಡ ಬದಲಾವಣೆ ಏನೂ ಆಗುವುದಿಲ್ಲ ಎಂದು ಟಾಂಗ್ ನೀಡಿದರು.
ಕ್ಯಾಂಟೀನ್ ಇಂದಿರಾ ಗಾಂಧಿ ಹೆಸರಿನ ಮೇಲೆ ನಡೆಯಬೇಕು ಎಂಬುದು ನಮ್ಮ ಆಸೆಯಾಗಿದೆ. ಹೆಸರು ಬದಲಾವಣೆ ಮಾಡೋದ್ರಿಂದ ನಮ್ಮ ಸಾಧನೆ ಮುಚ್ಚಿಡೋಕೆ ಆಗುವುದಿಲ್ಲ. ಸಿದ್ದರಾಮಯ್ಯನವರು ವಿಶೇಷ ಕಾಳಜಿ ವಹಿಸಿ ಇಂದಿರಾ ಕ್ಯಾಂಟೀನ್‍ಗೆ ಹೆಚ್ಚಿನ ಅನುದಾನ ಕೊಡುತ್ತಿದ್ದರು. ಆದರೆ ನಮ್ಮ ಯೋಜನೆ ಜನಪ್ರಿಯ ಆಗುತ್ತದೆ ಎಂದು ಬಿಜೆಪಿಯವರು ದುಡ್ಡು ಕೊಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.









