ವಾಷಿಂಗ್ಟನ್ : ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿ ಚೀನಾ ವಿರುದ್ಧ ಗಂಭೀರ ತನಿಖೆಗಳನ್ನು ನಡೆಸುತ್ತಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ವೇಳೆ ಮಾತನಾಡಿದ ಅವರು, ‘ಸೋಂಕು ಹರಡುವುದನ್ನು ಮೂಲದಲ್ಲೇ ತಡೆಯಬಹುದಿತ್ತು. ಈ ವಿಚಾರದಲ್ಲಿ ನಾವು ಚೀನಾ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ’. ‘ಕೊರೊನಾ ಹರಡುವುದನ್ನು ತ್ವರಿತವಾಗಿ ತಡೆಯಬಹುದಿತ್ತು. ಹಾಗೆ ಮಾಡಿದ್ದರೆ ಅದು ವಿಶ್ವದಾದ್ಯಂತ ಹರಡುತ್ತಿರಲಿಲ್ಲ’ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಚೀನಾವನ್ನು ಉದ್ದೇಶಿಸಿ ಟ್ರಂಪ್ “ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಸಾಕಷ್ಟು ಮಾರ್ಗಗಳಿವೆ. ನಾವು ಕೆಲವು ಗಂಭೀರ ತನಿಖೆಗಳನ್ನು ನಡೆಸುತ್ತಿದ್ದೇವೆ. ಇದು ನಿಮಗೆ ಈಗಾಗಲೇ ತಿಳಿದಿರಬಹುದು’ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಕೊರೊನಾದಿಂದಾದ ಆರ್ಥಿಕ ನಷ್ಟ ಉಲ್ಲೇಖಿಸಿ ಜರ್ಮನಿಯ ಪತ್ರಿಕೆಯೊಂದು ಚೀನಾಕ್ಕೆ ಶುಲ್ಕ ವಿಧಿಸಿ ಸಂಪಾದಕೀಯ ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಅದಕ್ಕಿಂತಲೂ ಸುಲಭವಾದದ್ದನ್ನು ಏನಾದರೂ ಮಾಡಲಿದ್ದೇವೆ. ‘ಜರ್ಮನಿ ಹೇಳುತ್ತಿರುವುದಕ್ಕಿಂತಲೂ ಹೆಚ್ಚು ಹಣದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾವಿನ್ನೂ ಅಂತಿಮ ಮೊತ್ತ ನಿರ್ಧರಿಸಿಲ್ಲ. ಅದಿನ್ನೂ ಹೆಚ್ಚೇ ಇರಲಿದೆ’. ಇದು ಜಾಗತಿಕವಾಗಿ ಆದ ನಷ್ಟ. ಇದು ಅಮೆರಿಕಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಆದ ಹಾನಿ ಎಂದೂ ಟ್ರಂಪ್ ಹೇಳಿದ್ದಾರೆ.
ಕೊರೊನಾದಿಂದಾಗಿ ಅಮೆರಿಕದಾದ್ಯಂತ 55,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಭಾರಿ ಹೊಡೆತಬಿದ್ದಿದೆ. ಲಕ್ಷಾಂತರ ಜನ ನಿರುದ್ಯೋಗಿಗಳಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.