ಅಬ್ಬಬ್ಬಾ ಈ ಕೇಕ್ ನ ಒಂದು ಸ್ಲೈಸ್ ನ ಬೆಲೆ ಬರೋಬ್ಬರಿ 1.90 ಲಕ್ಷ ರೂ.…!
25 ವರ್ಷಗಳ ಹಿಂದೆ ಪ್ಯಾರಿಸ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬ್ರಿಟನ್ ಯುವರಾಣಿ ಡಯಾನಾ ಅವರ ವಿವಾಹಕ್ಕಾಗಿ ತಯಾರಿಸಿದ್ದ 40 ವರ್ಷಗಳ ಹಿಂದಿನ ಕೇಕ್ ನ ಒಂದು ಸ್ಲೈಸ್ ಬರೋಬ್ಬರಿ 1850 ಪೌಂಡ್ ಗಳಿಗೆ ಅಂದ್ರೆ ಸುಮಾರು 1.90 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಸೇಲ್ ಆಗಿದೆ..
1981ರಲ್ಲಿ ಜರುಗಿದ್ದ ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ ಡಯಾನಾ ಸ್ಪೆನ್ಸರ್‌ರ ವಿವಾಹ ಮಹೋತ್ಸವ ಕೇಕ್ ತುಂಡು ಇದಾಗಿದೆ.. 1996ರಲ್ಲಿ ಈ ದಂಪತಿ ಬೇರ್ಪಟ್ಟರೂ ಸಹ ಅವರ ಮದುವೆಯ ಕೇಕ್ ಗೂ ಈಗಿನ ಕಾಲದಲ್ಲೂ ಭಾರೀ ಡಿಮ್ಯಾಂಡ್ ಇದೆ.. ಆಗ ಬ್ರಿಟನ್‌ನ ರಾಜಮನೆತನದ ವಧು–ವರರ ವಿವಾಹ ಮಹೋತ್ಸವದಲ್ಲಿ ತಯಾರಿಸಿದ 23 ವಿವಿಧ ಕೇಕ್ ಗಳಲ್ಲಿನ ಒಂದು ಕೇಕ್ ನ ಸ್ಲೈಸ್ ಅನ್ನು ಈಗ ಹರಾಜು ಹಾಕಲಾಗಿದೆ. ಗೆರಿ ಲೇಟನ್ ಎಂಬುವವರು ಈ ಕೇಕ್ ಅನ್ನು ಖರೀದಿಸಿದ್ದಾರೆ.
ಲಂಡನ್ ನಲ್ಲಿ ನಡೆಸಲಾದ ಈ ಹರಾಜಿನಲ್ಲಿ ಲೀಡ್ಸ್‌ನ ಗೆರಿ ಲೇಟನ್ ಅತಿ ಹೆಚ್ಚಿನ ಮೊತ್ತ ನೀಡಿ ಕೇಕ್ ತುಂಡನ್ನು ಖರೀದಿಸಿದ್ದಾರೆ. 40 ವರ್ಷಗಳಷ್ಟು ಹಳೆಯದಾದ ಈ ಕೇಕ್‌ನ ಕ್ರೀಂ ಐಸಿಂಗ್ ಮೇಲೆ ಬ್ರಿಟನ್ ರಾಜಮನೆತನದ ಲಾಂಛನವಿದೆ. ಹರಾಜಿನಲ್ಲಿ ಕೇಕ್ ಸ್ಲೈಸ್‌ನ ಆರಂಭಿಕ ಬೆಲೆ 300-500 ಪೌಂಡ್‌ಗಳಷ್ಟಿತ್ತು. ಕೊನೆಯಲ್ಲಿ ಈ ಮೊತ್ತದ ಮೂರರಷ್ಟಕ್ಕೆ ಕೇಕ್ ಸ್ಲೈಸ್ ಮಾರಾಟವಾಗಿದೆ. ಆದರೆ ಇದನ್ನು ಸವಿಯುವ ಭಾಗ್ಯ ಯಾರಿಗೂ ಇಲ್ಲ. ಈ ಕೇಕ್ ತುಂಡನ್ನು ಹರಾಜಿಗಿಡುವ ಮೊದಲೇ ಇದರ ಪಕ್ಕ ಎಚ್ಚರಿಕೆ ಇದನ್ನು ತಿನ್ನುವ ಹಾಗಿಲ್ಲ ಎಂಬ ಪುಟ್ಟ ಸೂಚನಾ ಫಲಕವನ್ನು ಹಾಕಲಾಗಿತ್ತು.







