ಪೆಗಾಸಿಸ್ ವಿಚಾರದಲ್ಲಿ ಸತ್ಯ ಹೊರ ಬಂದ್ರೆ ಮೋದಿ ರಾಜೀನಾಮೆ
ಬೆಳಗಾವಿ : ಒಂದು ವೇಳೆ ಪೆಗಾಸಿಸ್ ವಿಚಾರ ಚರ್ಚೆ ಆದ್ರೆ, ಸತ್ಯ ಹೊರಗೆ ಬಂದ್ರೆ ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಗಾಸೆಸ್ ವಿಚಾರವನ್ನ ಸದನದಲ್ಲಿ ಚರ್ಚೆ ಆಗಬೇಕೆಂದು ವಿಪಕ್ಷದ ಎಲ್ಲಾ ನಾಯಕರ ಬೇಡಿಕೆ ಆಗಿತ್ತು. ಪೆಗಾಸೆಸ್ ದೇಶದ ಭದ್ರತೆ ವಿಚಾರವಾಗಿದೆ. ಪೆಗಾಸೆಸ್ ಕದ್ದಾಲಿಗೆ, ರೈತ ವಿರೋಧಿ ಕರಾಳ ಕಾನೂನು, ತೈಲ ಬೆಲೆ ಏರಿಕೆ ಬಗ್ಗೆ ಚರ್ಚೆ ಆಗಬೇಕೆಂದು ವಿಪಕ್ಷ ಗಳ ಆಗ್ರಹವಾಗಿತ್ತು. ವಿರೋಧ ಪಕ್ಷಗಳು ಚರ್ಚೆಗೆ ವಿರೋಧವಾಗಿವೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಕೋವಿಡ್ ಚರ್ಚೆ ವಿಚಾರದಲ್ಲಿ ವಿಪಕ್ಷಗಳು ನಾಲ್ಕು ಗಂಟೆಗಳ ಕಾಲ ಚರ್ಚೆಯಲ್ಲಿ ಪಾಲ್ಗೊಂಡಿವೆ. ಹೊಣೆಗಾರಿಕೆ ಇರುವಂತಹ ಆಡಳಿತ ಪಕ್ಷ ಚರ್ಚೆಯ ವಿಚಾರದಲ್ಲಿ ಸಂಪೂರ್ಣವಾಗಿ ಸೋತು ಹೋಗಿದೆ ಎಂದು ಕಿಡಿಕಾರಿದರು.
ಇನ್ನು ಪ್ರಶ್ನೆ ಕೇಳುವುದು ವಿಪಕ್ಷ ಗಳ ಹಕ್ಕು. ಉತ್ತರ ಕೊಡುವುದು ಸರ್ಕಾರ ಹಕ್ಕು ಎಂದು ಅರುಣ್ ಜೇಟ್ಲಿ ಅವರೇ ಹೇಳಿದ್ದಾರೆ. ಉತ್ತರ ಕೊಡದಿದ್ದರೇ ಪ್ರತಿಭಟನೆ ಮಾಡುವುದು ವಿಪಕ್ಷಗಳ ಹಕ್ಕು ಅಂತಾ ಹೇಳಿದ್ದಾರೆ. ಹೀಗಾಗಿ ವಿಪಕ್ಷಗಳು ಯಾವುದೇ ದೇಶದ್ರೋಹದ ಕೆಲಸ ಮಾಡಿಲ್ಲ. ಒಂದು ವೇಳೆ ಪೆಗಾಸೆಸ್ ವಿಚಾರ ಚರ್ಚೆ ಆದ್ರೆ, ಸತ್ಯ ಹೊರಗೆ ಬಂದ್ರೆ ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಗುಡುಗಿದರು.
ಯುಪಿಎ ಸರ್ಕಾರ ಇದ್ದಾಗ ಇದೇ ಬಿಜೆಪಿಯವರು ಹೆಚ್ಚಿನ ಅವಧಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ವಿಮೆ ಬಿಲ್ ಸದನದಲ್ಲಿ ಪಾಸ್ ಮಾಡಿದ್ದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ರಾಜ್ಯಸಭೆ, ಲೋಕಸಭೆ ಕಲಾಪ ಗೊತ್ತಿಲ್ಲದ ಮಾರ್ಷಲಗಳೂ ಅಥವಾ ಗೂಂಡಾಗಳನ್ನ ಬಳಿಸಿಕೊಂಡಿದ್ದಾರೆ ಎಂದು ಅವರು ದೂರಿದರು.









