ಪಿಕ್ಚರ್ ಅಭೀ ಬಾಕಿ ಹೈ ಎಂದ ಆನಂದ್ ಸಿಂಗ್ ಗೆ ರಾಜೂಗೌಡ ಟಾಂಗ್
ಬೆಂಗಳೂರು : ಖಾತೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮುಸಿನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ಅವರ ನಡೆ ಕುತೂಹಲ ಕೆರಳಿಸಿದೆ. ವಿಜಯನಗರಕ್ಕೆ ಸಿಎಂ ಬೇಟಿ ನೀಡಿದ್ದರೂ ಆನಂದ್ ಸಿಂಗ್ ಅವರನ್ನು ಭೇಟಿ ಮಾಡುವ ಗೋಜಿಗೆ ಹೋಗಿಲ್ಲ. ಈ ಮಧ್ಯೆ ಅವರು ಪಿಕ್ಚರ್ ಅಭೀ ಬಾಕಿ ಹೈ ಎಂದು ಹೇಳಿಕೆ ನೀಡಿದ್ದು, ಅದಕ್ಕೆ ಇದೀಗ ಶಾಸಕ ರಾಜೂಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದ ಬಳಿ ಮಾತನಾಡಿದ ರಾಜೂಗೌಡ, ಏನಣ್ಣ ಪಿಚ್ಚರ್ ಅಭೀ ಬಿ ಬಾಕಿ ಹೈ ಎಂದು ಹೇಳಿದ್ದೀಯಾ, ಥಿಯೇಟರ್ ಸಬ್ ಬಂದ್ ಹೈ, ಪಿಚ್ಚರ್ ಕೈಸಾ ಚಾಲೂ ಹೋತಾ ಹೈ ಎಂದು ನಾವು ಆನಂದ್ ಸಿಂಗ್ ಅವರ ಕಾಲೆಳೆದಿದ್ದೇವೆ. ಆದ್ರೆ ಸಚಿವ ಆನಂದ್ ಸಿಂಗ್ ಅವರಿಗೆ ಖಾತೆ ವಿಚಾರದಲ್ಲಿ ಅಸಮಾಧಾನ ಇರುವುದು ನಿಜ. ನಾವೆಲ್ಲ ಸ್ನೇಹಿತರು ಅವರಿಗೆ ಮಾತಾಡಿದ್ದೇವೆ. ಈಗ ಸಮಾಧಾನ ಆಗಿದ್ದಾರೆ ಎಂದು ತಿಳಿಸಿದರು.
ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಸಹ ಬರುತ್ತಾರೆ. ನಾವೂ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸಿದ್ದೇವೆ. ಖಾತೆ ಹಂಚಿಕೆಯಲ್ಲಿ ಅವರಿಗೆ ಅಸಮಧಾನ ಇರೋದು ಸತ್ಯ ಎಂದು ಪುನರುಚ್ಚರಿಸಿದರು.









