ಬಿಜೆಪಿಯ ಜನಾಶೀರ್ವಾದ ಯಾತ್ರೆ ಬಗ್ಗೆ ವಿಶ್ವನಾಥ್ ಅಸಮಾಧಾನ
ಮೈಸೂರು : ತಮ್ಮದೇ ಪಕ್ಷದ ಜನಾಶೀರ್ವಾದ ಯಾತ್ರೆಯ ವಿರುದ್ಧ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯದಲ್ಲಿ ಕೊರೊನಾ ಆತಂಕ ದೂರವಾಗಿಲ್ಲ. ಆದ್ರೂ ರಾಜಕೀಯ ಸಣೆಗಳನ್ನು ನಡೆಸಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ರಾಜಕೀಯ ಸಭೆ, ಸಮಾರಂಭ ಆಯೋಜಿಸುವುದು ಸರಿಯಲ್ಲ. ಜನರನ್ನು ಗುಂಪು ಸೇರಿಸುವ ಕಾರ್ಯಕ್ರಮಗಳನ್ನು ರಾಜಕೀಯ ಪಕ್ಷಗಳು ಆಯೋಜಿಸಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಜನಾಶೀರ್ವಾದ ಕಾರ್ಯಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದರು. ಜೊತೆಗೆ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು- ಬೆಂಗಳೂರು ದಶಪಥ ಯೋಜನೆ ವಿಚಾರವಾಗಿ ಪ್ರತಾಪ್ ಸಿಂಹ ಅವರಿಗೆ ಕ್ಲಾಸ್ ತೆಗೆದುಕೊಂಡ ಹೆಚ್ ವಿಶ್ವನಾಥ್, ಮೈಸೂರು- ಬೆಂಗಳೂರು ದಶಪಥ ಯೋಜನೆ ನಿಮ್ಮದಲ್ಲ. ಯಾವಾಗಲೋ ಜಾರಿಯಾದ ಯೋಜನೆಯನ್ನು ನನ್ನದು ಎಂದರೆ ಹೇಗೆ ಎಂದು ಪ್ರಶ್ನಿಸಿದರು. ನಾನು ಸಂಸದನಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಡಿಪಿಆರ್ ತಯಾರಾಗಿತ್ತು. ಆ ವೇಳೆ ನಾನು ಹಾಗೂ ಸಂಸದರಾಗಿದ್ದ ಆರ್.ಧ್ರುವನಾರಾಯಣ, ರಮ್ಯಾ ಮತ್ತು ಡಿ.ಕೆ.ಸುರೇಶ್ ಇದಕ್ಕೆ ಸಂಬಂಧಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಅಂದು ತಯಾರಾಗಿದ್ದ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ನೀನು ಈಗ ಬಂದು ಎಲ್ಲವನ್ನೂ ನಾನೇ ಮಾಡಿದ್ದು ಅಂದರೆ ಹೇಗೆ’ ಎಂದು ಪ್ರಶ್ನಿಸಿದರು.
ಮೈಸೂರು-ಬೆಂಗಳೂರು ದಶಪಥ ಯೋಜನೆ 10-12 ವರ್ಷಗಳಷ್ಟು ಹಿಂದಿನ ಯೋಜನೆಯಾಗಿದ್ದು, ನಾನೇ ಮಾಡಿದ್ದೇನೆ ಎಂದು ಎಷ್ಟು ದಿನ ಸುಳ್ಳು ಹೇಳುತ್ತೀರಾ ಎಂದು ಪ್ರಶ್ನಿಸಿದ ವಿಶ್ವನಾಥ್, ನೀವು ಏನಾದರೂ ಹೊಸ ಯೋಜನೆ ತಂದಿದ್ದರೆ ಜನರಿಗೆ ತಿಳಿಸಿ ಎಂದು ಸವಾಲ್ ಹಾಕಿದರು.









