ಆರ್ ಸಿಬಿಗೆ ವನಿಂದು ಹಸರಂಗ ಆಯ್ಕೆ : ಆಕಾಶ್ ಚೋಪ್ರಾ ಮೆಚ್ಚುಗೆ
ಮುಂಬೈ : ಐಪಿಎಲ್ ದ್ವಿತೀಯಾರ್ಧಕ್ಕೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ತನ್ನ ಬದಲಿ ಆಟಗಾರರನ್ನು ಪ್ರಕಟ ಮಾಡಿದೆ.
ಈ ಪೈಕಿ ಆಡಂ ಜಂಪಾ ಬದಲಿಗೆ ಶ್ರೀಲಂಕಾದ ಸ್ಪಿನ್ ಆಲ್ ರೌಂಡರ್ ವನಿಂದು ಹಸರಂಗ ಅವರನ್ನು ಆರ್ ಸಿಬಿ ಆಯ್ಕೆ ಮಾಡಿದೆ.
ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಆರ್ ಸಿಬಿ ವನಿಂದು ಹಸರಂಗ ಆಯ್ಕೆ ಬಗ್ಗೆ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಆಕಾಶ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರು ಫ್ರಾಂಚೈಸಿ ಅಸಾಧಾರಣ ಆಟಗಾರನನ್ನು ಆಯ್ಕೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವನಿಂದು ಹಸರಂಗ ಆರ್ ಸಿಬಿಯ ಮಾಡಿದ ಅದ್ಭುತ ಆಯ್ಕೆಯಾಗಿದೆ. ಆತ ಇತ್ತೀಚೆಗೆ ಆಡಿದ ಟಿ20 ಕ್ರಿಕೆಟ್ ನಲ್ಲೆಲ್ಲಾ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರು ಶ್ರೀಲಂಕಾ ತಂಡದಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ.
ತಮ್ಮ ರಾಷ್ಟ್ರಕ್ಕಾಗಿ ಆಡಿರುವ ಪ್ರತಿ ಪಂದ್ಯದಲ್ಲೂ ಕೊಡುಗೆ ನೀಡಿದ್ದಾರೆ. ಹಾಗಾಗಿ, ಆರ್ ಸಿಬಿಗೆ ಹಸರಂಗ ಅದ್ಭುತ ಸೇರ್ಪಡೆ ಎಂದು ನಾನು ಭಾವಿಸುತ್ತೇನೆ. ಅವರು ಚಹಾಲ್ ಜೊತೆಗೆ ಸೇರಿ ಬೌಲಿಂಗ್ ಮಾಡಬಹುದು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೇ ಡೇನಿಯಲ್ ಸ್ಯಾಮ್ಸ್ ಬದಲಿಗೆ ತಂಡಕ್ಕೆ ಸೇರಿಕೊಂಡಿರುವ ಟಿಮ್ ಡೇವಿಡ್ ಬಗ್ಗೆ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.









