ಕಟ್ಟಡ ಕಾಮಗಾರಿಗೆಂದು ತೆಗೆದಿದ್ದ ಗುಂಡಿಯಲ್ಲಿ ಬಿದ್ದು 15 ವರ್ಷದ ಬಾಲಕಿ ಸಾವು…
ಕಟ್ಟಡ ಕಾಮಗಾರಿಗೆಂದು ತೆಗೆಯಲಾಗಿದ್ದ ಗುಂಡಿಯಲ್ಲಿ ಕಾಲುಜಾರಿ ಬಿದ್ದು 15 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿ ನಡೆದಿದೆ. ಶ್ರೀದೇವಿ ಮೃತ ಬಾಲಕಿ.
ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರುವ ಕೆ.ಎಸ್.ಆಸ್ಪತ್ರೆ ಪಕ್ಕದಲ್ಲಿ ಕಟ್ಟಡ ಕಾಮಗಾರಿಗೆಂದು ಗುಂಡಿ ಅಗೆಯಲಾಗಿತ್ತು. ನಿನ್ನೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಗುಂಡಿಯಲ್ಲಿ ತುಂಬಿಕೊಂಡಿತ್ತು. ಕೆ.ಎಸ್.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಗೆ ಊಟ ಕೊಡಲು ಮಂಗಳವಾರ ಬಂದಿದ್ದ 15 ವರ್ಷದ ಬಾಲಕಿ ಶ್ರೀದೇವಿ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾಳೆ.
ಮೊನ್ನೆ ಸಂಜೆಯಿಂದ ಬಾಲಕಿ ಕಾಣಿಸದಿದ್ದಾಗ ಮಗಳಿಗಾಗಿ ಪೋಷಕರು ಹುಡುಕಾಡಿದ್ದಾರೆ. ನಂತರ ಬಾಲಕಿಯ ಪೋಷಕರು ಮಂಗಳವಾರ ರಾತ್ರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಶ್ರೀದೇವಿ ನೀರು ತುಂಬಿದ ಗುಂಡಿಗೆ ಬಿದ್ದಿರುವುದು ಗೋಚರಿಸಿದೆ. ಬಾಲಕಿಯ ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.








